ADVERTISEMENT

ಎಪಿಎಂಸಿ: ಮಾವು ಮಾರುಕಟ್ಟೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:52 IST
Last Updated 23 ಏಪ್ರಿಲ್ 2017, 10:52 IST

ಚಾಮರಾಜನಗರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಶನಿವಾರದಿಂದ ಮಾವಿನ ಮಾರುಕಟ್ಟೆ ಆರಂಭಗೊಂಡಿದೆ.ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಮಾವಿನ ಇಳು ವರಿ ಕಡಿಮೆಯಾಗಿದೆ. ಆದರೂ, ಕೆಲವು ರೈತರು ಹಾಗೂ ವ್ಯಾಪಾರಿಗಳು ಮಾವು ಮಾರುಕಟ್ಟೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 5 ಟನ್‌ಗೂ ಹೆಚ್ಚು ವಿವಿಧ ಜಾತಿಯ ಮಾವು ಎಪಿಎಂಸಿ ಆವರಣಕ್ಕೆ ಲಗ್ಗೆ ಇಟ್ಟಿತ್ತು.

ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಎಪಿಎಂಸಿ ಆವರಣದಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ತಿಳಿಸಿದರು.ಮಧ್ಯವರ್ತಿ ಹಾವಳಿ ಇಲ್ಲದೆ ಎಪಿಎಂಸಿಯಲ್ಲಿ ರೈತರು ನೇರವಾಗಿ ಮಾವು ಮಾರಾಟ ಮಾಡಬಹುದಾಗಿದೆ. ಗ್ರಾಹಕರು ತಮಗೆ ಇಷ್ಟವಾದ ಹಣ್ಣು ಖರೀದಿಸಬಹುದು. ಇದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿ ಕುಮಾರ್ ಮಾತನಾಡಿ, ಜಿಲ್ಲಾ ಕೇಂದ್ರ ದಲ್ಲಿ ಮಾವಿನ ಕಾಲದಲ್ಲಿ ರೈತರು ಮತ್ತು ಮಾರಾಟಗಾರರು ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದರು. ರೈತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಮಾವು ಮಾರುಕಟ್ಟೆಗೆ ಚಾಲನೆ ನೀಡಲಾಗಿದೆ ಎಂದರು.ಮಾವಿನ ಹಣ್ಣುಗಳ ಮಾರಾಟಕ್ಕೆ ಆಗಮಿಸುವ ರೈತರಿಗೆ ಸರ್ಕಾರದಿಂದ ಮಾವು ಬೆಳೆ ಅಭಿವೃದ್ಧಿಗೆ ನೆರವು, ಮಾವು ಕೀಳುವ ಸಲಕರಣೆ, ಕ್ರೇಟ್ಸ್, ಔಷಧಿಯನ್ನು ರಿಯಾಯಿತಿ ದರದಡಿ ನೀಡಲಾಗುತ್ತದೆ.

ADVERTISEMENT

ಜತೆಗೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಮಾವಿನ ತೋಟಗಳಿಗೆ ತೆರಳಿ ಇಳುವರಿ ಹೆಚ್ಚಳಕ್ಕೆ ರೈತರಿಗೆ ಸೂಕ್ತ ಸಲಹೆ ನೀಡಲಿದ್ದಾರೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಎಪಿಎಂಸಿ ನಿರ್ದೇಶಕರಾದ ವಿಶ್ವನಾಥ್, ನಾಗೇಂದ್ರ, ಹೆಗ್ಗೂರುಶೆಟ್ಟಿ, ನಂಜುಂಡಸ್ವಾಮಿ, ಬಸವನಾಯಕ, ಶಿವಸ್ವಾಮಿ, ಸಿದ್ದಶೆಟ್ಟಿ, ಚಂದ್ರಶೇಖರ್, ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕ ರಘು, ಕಾರ್ಯದರ್ಶಿ ಚಿಕ್ಕಣ್ಣ, ಮಾರುಕಟ್ಟೆ ಅಧಿಕಾರಿ ಮಧುಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.