ADVERTISEMENT

ಕನಿಷ್ಠ ಸೌಲಭ್ಯಗಳಿಲ್ಲದ ಶಾಲೆ; ದೂರು

​ಪ್ರಜಾವಾಣಿ ವಾರ್ತೆ
Published 13 ಮೇ 2017, 11:04 IST
Last Updated 13 ಮೇ 2017, 11:04 IST

ಚಾಮರಾಜನಗರ:  ‘ಸಾರ್‌, ನಮಗೆ ಕೊಡೋ ಬಿಸಿಯೂಟದಲ್ಲಿ ಕಲ್ಲು ಸಿಕ್ತವೆ’. ‘ಶಾಲೇಲಿ ಶೌಚಾಲಯ ಇಲ್ಲ, ಬಯಲಿಗೇ ಹೋಗ್ಬೇಕು’. ‘ನಮ್ಮ ಸ್ಕೂಲಲ್ಲಿ ಕುಡಿಯೋಕೆ ನೀರಿಲ್ಲ...’ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಮೇಳದ ಸಂವಾದದಲ್ಲಿ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದಿಟ್ಟ ದೂರುಗಳಿವು.

ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ನಗರದ ವಿವಿಧ ಶಾಲೆಗಳ ಮಕ್ಕಳು ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಹಂಚಿಕೊಂಡರು. ಜತೆಗೆ ಕೆಲವು ಬೇಡಿಕೆಗಳನ್ನೂ ಮುಂದಿಟ್ಟರು. ‘ನಮ್ಮ ಬಡಾವಣೆಯಲ್ಲಿ ರಸ್ತೆ ಚೆನ್ನಾಗಿಲ್ಲ. ಮಳೆ ಬಂದರೆ ಕೊಚ್ಚೆಯಾಗುತ್ತದೆ. ಜತೆಗೆ ಹಂದಿಗಳ ಕಾಟ. ಶಾಲೆಗೆ ಹೋಗಲು ಭಯ’ ಎಂದು ಭಗೀರಥ ಬಡಾವಣೆಯ ಲಕ್ಷ್ಮಿ ಅಳಲು ತೋಡಿಕೊಂಡಳು.

‘ನಮ್ಮ ಶಾಲೆಯಲ್ಲಿ ಕುಡಿಯುವ ನೀರಿಲ್ಲ. ಭದ್ರತೆಗೆ ಕಾಂಪೌಂಡ್‌ ಇಲ್ಲ. ಬಿಸಿ ಊಟದಲ್ಲಿ ಕಲ್ಲು ಸಿಗುತ್ತದೆ’ ಎನ್ನುವುದು ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿನಿ ನಂದಿನಿ ದೂರು. ‘ಶಾಲೆಯಲ್ಲಿ ಶೌಚಾಲಯ ಇಲ್ಲ. ಹೀಗಾಗಿ ಬಯಲಿಗೆ ಹೋಗಬೇಕು. ಕೊಠಡಿಗಳೂ ಕಡಿಮೆ. ಎರಡು ತರಗತಿಗಳ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸುತ್ತಾರೆ’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಸೋನಿ ಬೇಸರದಿಂದ ಹೇಳಿಕೊಂಡಳು.

ADVERTISEMENT

‘ಚಂಡಿಪುರದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆಯಿದೆ. ಈಗ ನಮ್ಮನ್ನು 9ನೇ ತರಗತಿಗೆ ಬೇರೆ ಶಾಲೆಯಲ್ಲಿ ಸೇರಿಸಿಕೊಳ್ಳುವುದಿಲ್ಲ. ಹೀಗಾಗಿ ಪ್ರೌಢಶಾಲೆ ನಿರ್ಮಿಸಿಕೊಡಿ’ ಎಂಬ ಬೇಡಿಕೆ ವಿದ್ಯಾರ್ಥಿನಿ ಮಮತಾಳದ್ದು.

ವಿದ್ಯಾರ್ಥಿವೇತನ ಸಿಗುತ್ತಿಲ್ಲ, ಸಿಟಿ ಬಸ್‌ ಇಲ್ಲದೆ ದೂರದ ಶಾಲೆಗೆ ಹೋಗಲು ಆಗುತ್ತಿಲ್ಲ ಎಂಬ ದೂರುಗಳು ಕೇಳಿಬಂದವು. ಅಳಲು ತೋಡಿಕೊಂಡವರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿದ್ದರು. ಈ ದೂರು ಮತ್ತು ಬೇಡಿಕೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಬಿ.ಎನ್. ನಾಗೇಂದ್ರ ಸಾವಧಾನದಿಂದ ಪ್ರತಿಕ್ರಿಯಿಸಿದರು. ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಇನ್ನು ದಾಖಲಾತಿಗೆ ಸಮಸ್ಯೆ ಹೊಂದಿರುವ ಮಕ್ಕಳನ್ನು ಶಾಲೆಗೆ ಸೇರಿಸಲು ಸ್ವತಃ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ಕುಮಾರ್‌ ಕೆ., ‘ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾಚೆ ಮಕ್ಕಳು ಏನನ್ನು ಇಷ್ಟಪಡುತ್ತವೆ ಎನ್ನುವುದನ್ನು ಅರಿತುಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿ. ಆದರೆ, ಇವುಗಳೂ ಈಗ ವ್ಯಾಪಾರೀಕರಣಗೊಳ್ಳುತ್ತಿವೆ. ಶಿಕ್ಷಣ ಪದ್ಧತಿಯ ಒಂದು ಭಾಗವಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾಮಾಜಿಕ ಮಾಲಿನ್ಯ ನಮ್ಮ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಸಕಾರಾತ್ಮಕ ಕೆಲಸಗಳನ್ನು ಸಹ ನಕಾರಾತ್ಮಕ ಕಣ್ಣಿನಿಂದ ನೋಡುವ ಪರಿಪಾಠ ಬೆಳೆದಿದೆ. ಹೀಗಾಗಿ ಸಮಾಜವನ್ನು ಬದಲಿಸುವ ನಿಟ್ಟಿನಲ್ಲಿ ಮಕ್ಕಳ ಮೇಲೆ ಮಾತ್ರ ನಿರೀಕ್ಷೆ ಹೊಂದಲು ಸಾಧ್ಯ’ ಎಂದರು.

ಆರೋಗ್ಯ ಇಲಾಖೆ ಅಧಿಕಾರಿ ಡಾ. ಲೋಹಿತ್‌, ಸಮಾಜ ಸೇವಕ ಡಾ. ಜೆರ್‍ರಿಪಾಯಸ್‌, ನವೋದಯ ಮಕ್ಕಳ ಒಕ್ಕೂಟದ ಸುಚಿತ್ರ, ಚೈತನ್ಯ ಗೃಹಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.