ADVERTISEMENT

ಕಳಪೆ ಹತ್ತಿಬೀಜ; ಜಾಲ ಪತ್ತೆ ಮಾಡಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ ನಾಗೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:31 IST
Last Updated 27 ಮಾರ್ಚ್ 2015, 11:31 IST
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಕೃಷಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ ಮಾತನಾಡಿದರು  -ಪ್ರಜಾವಾಣಿ ಚಿತ್ರ
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಕೃಷಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ ಮಾತನಾಡಿದರು -ಪ್ರಜಾವಾಣಿ ಚಿತ್ರ   

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಕಳಪೆ ಹತ್ತಿಬೀಜ ವಿತರಣೆ ಮಾಡಿ ರೈತರಿಗೆ ನಷ್ಟ ಮಾಡುತ್ತಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ, ಜೈಲಿಗೆ ಕಳುಹಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ ಸೂಚನೆ ನೀಡಿದರು.

ತಾಲ್ಲೂಕಿನ ಬೇಗೂರು ಕೃಷಿ ಕೇಂದ್ರದ ಆವರಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬೇಗೂರು ಭಾಗದಲ್ಲಿ ಹೆಚ್ಚಿನ ಹತ್ತಿ ಬೆಳೆ ಬೆಳೆಯಲಾಗುತ್ತಿದ್ದು, ಕಳಪೆ ಹತ್ತಿಬೀಜ ಜಾಲದವರು ತಳವೂರುತ್ತಿರುವ ಮಾಹಿತಿ ಇದೆ. ಅಂಥವರನ್ನು ಕಂಡುಹಿಡಿದು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿ ಸೂಚಿಸಿದರು.

ಪರವಾನಗಿ ಪಡೆದು ರಸಗೊಬ್ಬರ ಮತ್ತು ಕೃಷಿ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರು ಅಂತಹ ಕಂಪೆನಿಗಳ ಮೇಲೆ ಗಮನಹರಿಸಿ ಮಾಹಿತಿ ನೀಡಬೇಕು. ರೈತರಿಗೆ ನಕಲಿ ಕಂಪೆನಿಗಳ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆಯನ್ನು ನೀಡಿದಾಗ ನಷ್ಟದ ಪ್ರಮಾಣ ತಗ್ಗುತ್ತದೆ ಎಂದರು.

ಅಧಿಕಾರಿಗಳು ರೈತರ ಬಳಿ ತೆರಳಿ ಕೃಷಿ ಚಟುವಟಿಕೆಗಳ ಸಲಹೆ ಮತ್ತು ಸಮಸ್ಯೆಗಳನ್ನು ತಿಳಿದು ಕೆಲಸ ಮಾಡಿ ಎಂದು ಹೇಳಿದರು.
ಕೃಷಿ ಸಹಾಯಕ ನಿರ್ದೇಶಕ ಮೋಹನ್‌ ದಾಸ್, ಕೃಷಿ ಅಧಿಕಾರಿ ಕೆಂಪರಾಜೇ ಅರಸ್, ಸಹಾಯಕ ಕಿರಿಯ ಕೃಷಿ ನಿರ್ದೇಶಕ ಲಕ್ಷ್ಮಣ್‌ ಕಲ್ಲಣ್ಣನವರ್‌ ಇತರರು ಹಾಜರಿದ್ದರು.

ಕಾರ್ಯಾಗಾರ ನಾಳೆ
ಚಾಮರಾಜನಗರ:
ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ.ಪಿ. ಪುಟ್ಟಬುದ್ಧಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಭೃಂಗೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ವಕೀಲರಾದ ಮಮತ, ಪ್ರಸೂತಿ ತಜ್ಷರಾದ ಡಾ.ಕಾವ್ಯಶ್ರೀ, ಜಿಲ್ಲಾ ಉಪ ಆರಕ್ಷಕ ಅಧೀಕ್ಷಕ ಮಹಂತೇಶ್‌ ಇ. ಮುಪ್ಪಿನಮಠ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
*
ಕೃಷಿ ಅಧಿಕಾರಿಗಳು ರೈತರ ಬಳಿಗೇ ತೆರಳಿ ಕೃಷಿ ಚಟುವಟಿಕೆಗಳ ಸಲಹೆ ಮತ್ತು ಸಮಸ್ಯೆಗಳನ್ನು ತಿಳಿದು ಕೆಲಸ ಶೀಘ್ರ ಕೆಲಸ ಮಾಡಬೇಕು
- ಡಿ.ಸಿ. ನಾಗೇಂದ್ರ,
ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.