ADVERTISEMENT

‘ಕವಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಬೇಕು’

ಬುದ್ಧ ಪೂರ್ಣಿಮಾ ಕವಿಗೋಷ್ಠಿ; ಸಾಹಿತಿ ಮದ್ದೂರು ದೊರೆಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:37 IST
Last Updated 11 ಮೇ 2017, 7:37 IST
ಚಾಮರಾಜನಗರ: ‘ಬುದ್ಧನಲ್ಲಿದ್ದ ಶಾಂತಿ ಸೌಹಾರ್ದದ ಜಗತ್ತನ್ನು ನಿರ್ಮಿಸುವ ಸಾಮಾಜಿಕ ಹೊಣೆಗಾರಿಕೆ ಕವಿಗಳಲ್ಲಿ ಇರಬೇಕು’ ಎಂದು ಸಾಹಿತಿ ಮದ್ದೂರು ದೊರೆಸ್ವಾಮಿ ಹೇಳಿದರು.
 
ಬುದ್ಧ ಪೂರ್ಣಿಮೆ ಅಂಗವಾಗಿ ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ರಂಗತರಂಗ ಟ್ರಸ್ಟ್‌ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
 
‘ಕವಿಗಳು ಸಮಾಜದಲ್ಲಿನ ಸಮಸ್ಯೆಗಳನ್ನು ಕವಿತೆಯ ವಸ್ತುವನ್ನಾಗಿಸಿಕೊಳ್ಳಬೇಕು. ನಾವಾಡುವ ಆಡು ಭಾಷೆಯೇ ಕಾವ್ಯದ ಭಾಷೆಯೂ ಆಗಬೇಕು. ತಮ್ಮ ಅನುಭವಕ್ಕೆ ದಕ್ಕಿದ್ದನ್ನು ಕಾವ್ಯದ ಮೂಲಕ ಹಂಚಬೇಕು. ಆಗಲೇ ಅದರ ನಿಜವಾದ ಆಶಯ ಸಾರ್ಥಕವಾಗುವುದು’ ಎಂದು ಹೇಳಿದರು.
 
‘ಎಲ್ಲ ಧರ್ಮ ಸಂಸ್ಥಾಪಕರ ನಡುವೆ ಉನ್ನತ ಸ್ಥಾನದಲ್ಲಿರುವವನು ಬುದ್ಧ. ಬುದ್ಧ ಮತ್ತು ಪ್ರಕೃತಿ ಒಂದೇ ನಾಣ್ಯದ ಎರಡು ಮುಖಗಳು. ಸಕಲ ಜೀವಿಗಳಿಗೂ ಸಮಾನ ಆದ್ಯತೆ ನೀಡುವುದು ನಿಜವಾದ ಧರ್ಮ ಎಂದು ಬುದ್ಧ ಸಾರಿದ್ದ’ ಎಂದ ತಿಳಿಸಿದರು.
 
‘ಬುದ್ಧ ಜಗತ್ತಿಗೆ ಶಾಂತಿ, ಸೌಹಾರ್ದ, ಪ್ರೀತಿ ಮತ್ತು ಸಮಾನತೆಯ ಪಾಠ ಸಾರಿದ್ದಾನೆ. ಆದರೆ, ನಾವು ಆತನ ತತ್ವಕ್ಕೆ ವಿರುದ್ಧವಾದ ಹಾದಿ ತುಳಿದಿದ್ದೇವೆ. ದ್ವೇಷ, ಅಸೂಯೆ, ಆಕ್ರೋಶ, ಜಾತಿ, ಅಸ್ಪೃಶ್ಯತೆ ನಮ್ಮ ಒಡಲನ್ನು ಸುಡುತ್ತಿದೆ. ಇಂದು ಧರ್ಮದ ಒಳಗೆ ಯುದ್ಧವನ್ನೂ ಸೇರಿಸಿಕೊಂಡಿದ್ದೇವೆ.
 
ಧರ್ಮವೆಂದರೆ ಯುದ್ಧ, ಯುದ್ಧವೆಂದರೆ ದೇಶಪ್ರೇಮ ಎಂಬ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು. ‘ಬುದ್ಧ ಎಂದಿಗೂ ಪ್ರಸ್ತುತ. ಈ ಕಾಲಘಟ್ಟದಲ್ಲಿ ನಮ್ಮೊಳಗೆ ಮನುಷ್ಯಪ್ರಜ್ಞೆ ಮರುಹುಟ್ಟು ಪಡೆಯಬೇಕಾಗಿದೆ. ನಮಗೆ ಈಗ ಸರಳತೆ, ಸತ್ಯ, ಸಮಾನತೆಯನ್ನು ಸಾರಿದ ಬುದ್ಧನ ಅಗತ್ಯತೆ ಇದೆ’ ಎಂದು ಹೇಳಿದರು.
 
ಸಾಹಿತಿ ಕೆಂಪನಪುರ ಸಿದ್ದರಾಜು ಮಾತನಾಡಿ, ‘ಭಾರತ ಬೌದ್ಧ ಧರ್ಮದ ನೆಲೆ ಮತ್ತು ಸೆಲೆ. ಆದರೆ, ಅದು ನೆರೆಯ ದೇಶಗಳಲ್ಲಿ ವ್ಯಾಪಕವಾಗಿ ಪಸರಿಸುತ್ತಿದೆ. ಎಲ್ಲೆಡೆ ಬುದ್ಧದ ತತ್ವಗಳಿಗೆ ಮನ್ನಣೆ ದೊರಕುತ್ತಿದೆ’ ಎಂದರು.
 
‘ಪ್ರಕೃತಿಯನ್ನು ಹೇಗೆ ಇದೆಯೋ ಹಾಗೆಯೇ ಒಪ್ಪಬೇಕು ಎನ್ನುವುದು ಬುದ್ಧನ ಚಿಂತನೆ. ಎಲ್ಲ ಇದ್ದೂ, ಏನೂ ಇಲ್ಲದಂತೆ ಶೂನ್ಯತೆಯ ಅವಸ್ಥೆಯಲ್ಲಿ ಬದುಕಬೇಕು. ಈ ಚಿಂತನೆಗಳು ನಮ್ಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ್ದಾಗಿವೆ’ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ರಂಗಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಹಿರಿಯ ಸಾಹಿತಿ ಜಿ.ಡಿ. ದೊಡ್ಡಯ್ಯ ಉಪಸ್ಥಿತರಿದ್ದರು. ತಾಲ್ಲೂಕಿನ ವಿವಿಧ ಕವಿಗಳು ಬುದ್ಧನನ್ನು ಕುರಿತು ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.