ADVERTISEMENT

ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:13 IST
Last Updated 24 ಮಾರ್ಚ್ 2017, 8:13 IST

ಗುಂಡ್ಲುಪೇಟೆ: ತಾಲ್ಲೂಕಿನ ಕೂತ ನೂರು, ಭೀಮನಬೀಡು, ಬೇರಂಬಾಡಿ, ಆಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಪ್ರಚಾರ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಆಮಿಷಕ್ಕೆ ಬಲಿ ಯಾಗಿ ಭವಿಷ್ಯದಲ್ಲಿ ನಿಮಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಬೇಡಿ. ಕಾಂಗ್ರೆಸ್ಸಿಗರು ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ಇಟ್ಟುಕೊಂಡಿ ದ್ದಾರೆ. ಈಗ ಚುನಾವಣೆಯಲ್ಲಿ ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 23 ವರ್ಷದ ಬರದಿಂದ ಹೊರಬರಲು ನಿಮಗೆ ಈಗ ಅವಕಾಶ ಬಂದಿದೆ. ನಿರಂಜನ್‌ಕುಮಾರ್ ತಂದೆ ಶಿವಮಲ್ಲಪ್ಪ 2 ಬಾರಿ ಹಾಗೂ ನಿರಂಜನ್‌ಕುಮಾರ್ 2 ಬಾರಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಸೋಲು ಕಂಡ ಮಾತ್ರಕ್ಕೆ ಅವರು ಜನಸೇವೆಯಿಂದ ಯಾವತ್ತೂ ವಿಮುಖರಾಗಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಯೋಜನೆಗಳಾದ ಭಾಗ್ಯಲಕ್ಷ್ಮಿ, ವಿಧವಾ, ವೃದ್ಧಾಪ್ಯ, ಅಂಗವಿಕಲ ವೇತನ ಪ್ರಸ್ತಾಪಿದ ಯಡಿ ಯೂರಪ್ಪ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದ ಸರ್ಕಾರ ಬೇಕಾ? ಸಾಲಮನ್ನಾ ಮಾಡದೇ ಸಂಕಷ್ಟಕ್ಕೆ ದೂಡಿದ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು.

ಅಭ್ಯರ್ಥಿ ನಿರಂಜನ್ ಕುಮಾರ್ ಮಾತನಾಡಿ, ತಾಲ್ಲೂಕಿನ ಕೆರೆ– ಕಟ್ಟೆಗಳು ಬತ್ತಿ ಹೋಗಿದೆ. ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಹಿಂದೆ ಅಧಿಕಾರ ಅನುಭವಿಸಿದ ಮಹದೇವ ಪ್ರಸಾದ್ ಅವರ ದೂರದರ್ಶಿತ್ವ ಇಲ್ಲದ ಆಡಳಿತವೇ ಕಾರಣ ಎಂದು ಆರೋಪಿಸಿದರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ನಿರಂಜನ್ ಕುಮಾರ್ ಅವ ರನ್ನು ಬೆಂಬಲಿಸಿದರೆ ಯಡಿಯೂರಪ್ಪ ಅವರನ್ನು ಬೆಂಬಲಿಸಿದಂತೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ಶಕ್ತಿ ತುಂಬಿದಂತೆ ಎಂದು ಹೇಳಿದರು.

ಸಂಸದ ಶ್ರೀರಾಮಲು ಮಾತನಾಡಿ, ‘ಕರ್ನಾಟಕದಲ್ಲಿ ಮತ್ತೊಮ್ಮೆ ಸುವರ್ಣ ಯುಗ ಆರಂಭವಾಗಲಿದ್ದು, ಭಾವಿ ಮುಖ್ಯಮಂತ್ರಿಯೇ ಬಂದು ಮತ ಯಾಚನೆ ಮಾಡುತ್ತಿದ್ದಾರೆ’ ಎಂದರು. ಪುರಸಭಾ ಸದಸ್ಯ ಗೋವಿಂದ ರಾಜು, ಶಿವಪುರ ಸುರೇಶ್, ಮಂಡಲ ಅಧ್ಯಕ್ಷ ಎಲ್.ಸುರೇಶ್, ಕೊಡಸೋಗೆ ಮಧು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.