ADVERTISEMENT

ಕುಡಿಯುವ ನೀರು ಪೂರೈಕೆಗೆ ಸೂಚನೆ

ನಗರಸಭೆ; ಓವರ್‌ ಹೆಡ್‌ ಟ್ಯಾಂಕರ್‌ಗಳಿಗೆ ನೀರು ಒದಗಿಸುವಂತೆ ಅಧ್ಯಕ್ಷೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:34 IST
Last Updated 11 ಮೇ 2017, 7:34 IST
ಚಾಮರಾಜನಗರ: ‘ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಂಗಲ ಶುದ್ಧೀಕರಣ ಘಟಕದಿಂದ ನೇರವಾಗಿ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ ಸೂಚಿಸಿದರು.
 
ನಗರದ ನಗರಸಭೆ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
 
‘ತಾಲ್ಲೂಕಿನ ಮಂಗಲ ಗ್ರಾಮದ ಶುದ್ಧೀಕರಣ ಘಟಕದಲ್ಲಿ ಹಳೇ ಮೋಟರ್‌ ಬದಲಾವಣೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದ ಅವರು, ನೇರವಾಗಿ ನಗರದ ದೊಡ್ಡಂಗಡಿ ಬೀದಿಯಲ್ಲಿ ಅಳವಡಿಸಿರುವ ಮುಖ್ಯ ಕೊಳವೆ ಮಾರ್ಗದ ಮೂಲಕ ಮದರ್ ಟ್ಯಾಂಕ್‌ಗೆ ನೀರು ತುಂಬಿಸಬೇಕು’ ಎಂದು ತಿಳಿಸಿದರು.
 
‘ರೈಸಿಂಗ್‌ಮೇನ್‌ನಲ್ಲಿ ಸಂಪರ್ಕ ಹೊಂದಿರುವವರು ಮಿತಿಯಾಗಿ ನೀರು ಬಳಕೆ ಮಾಡಬೇಕು. ಅನಾವಶ್ಯಕವಾಗಿ ಪೋಲು ಮಾಡಬಾರದು ಎಂದು ಅಧಿಕಾರಿಗಳು ನಲ್ಲಿ ಸಂಪರ್ಕ ಪಡೆದಿರುವ ಮಾಲೀಕರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
 
‘ನಗರದಲ್ಲಿ ಆಮೆಗತಿ ವೇಗದಲ್ಲಿ ಸಾಗುತ್ತಿರುವ ಒಳಚರಂಡಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಗಮನ ಸೆಳೆದು ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು’ ಎಂದರು.
 
‘ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಬಗ್ಗೆ ದೂರು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ಗುಂಡಿಗಳನ್ನು ಮುಚ್ಚಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ತಾಕೀತು ಮಾಡಿದರು.
 
‘ನಗರದಲ್ಲಿ ಕಸಾಯಿಖಾನೆ ಮಳಿಗೆಯನ್ನು ಶೀಘ್ರವೇ ಆರಂಭಿಸಲಾಗುವುದು. ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಕಸಾಯಿಖಾನೆ ಮಳಿಗೆ ಪ್ರಾರಂಭಿಸಲು ಟೆಂಡರ್ ಕರೆಯಲಾಗುವುದು. ಜತೆಗೆ, ನಗರದ ಶುಚಿತ್ವ ಕಾಪಾಡಲು ಇತರೆಡೆ ಇರುವ ಮಾಂಸದಂಗಡಿಯನ್ನು ಮುಚ್ಚಿಸಲಾಗುವುದು’ ಎಂದು ಹೇಳಿದರು. 
 
ಪೌರಾಯುಕ್ತ ಎಂ. ರಾಜಣ್ಣ ಮಾತನಾಡಿ, ‘ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಹಲವು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
 
ವಿವಿಧ ವಿಭಾಗದಲ್ಲಿ ತ್ವರಿತವಾಗಿ ಸಾರ್ವಜನಿಕರ ಕೆಲಸ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ವಿಭಾಗದ ಇ– ಸ್ವತ್ತು ಶಾಖೆಯಲ್ಲಿ ಸ್ವಲ್ಪ ಮಟ್ಟಿನ ವಿಳಂಬವಾಗುತ್ತಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು’ ಎಂದರು.
 
ನಗರಸಭೆ ಸದಸ್ಯ ಇಮ್ರಾನ್ ಖಾನ್, ಎಇಇ ಸತ್ಯಮೂರ್ತಿ, ಪರಿಸರ ಎಂಜಿನಿಯರ್ ಗಿರಿಜಾ, ಆರೋಗ್ಯ ನಿರೀಕ್ಷಕರಾದ ಶರವಣ, ಮಹದೇವಸ್ವಾಮಿ, ಕಂದಾಯ ಅಧಿಕಾರಿ ನಂಜುಂಡಸ್ವಾಮಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.