ADVERTISEMENT

ಕೆರೆಗೆ ನೀರು ತುಂಬಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:00 IST
Last Updated 22 ಮಾರ್ಚ್ 2017, 10:00 IST

ಹನೂರು: ಬೇಸಿಗೆ ಬಂದರೆ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಗ್ರಾಮೀಣರು ನೀರಿಗಾಗಿ ಅನುಭವಿಸುವ ಸಂಕಷ್ಟ ಹೇಳತೀರದು. ಇದಕ್ಕೆ ಅಪವಾದ ಎಂಬಂತೆ ಗ್ರಾಮ ಪಂಚಾಯಿತಿಯಿಂದ ಹಾಗೂ ರೈತರೇ ಸ್ವಂತ ಹಣದಿಂದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ನೀರಿನ ಸಮಸ್ಯೆ ಬಗೆಹರಿಸಿ ಮಾದರಿಯಾಗಿದ್ದಾರೆ.

ಹೌದು. ಸಮೀಪದ ಕಣ್ಣೂರು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಸೇರಿದಂತೆ ಇದರ ವ್ಯಾಪ್ತಿಗೆ ಒಳಪಡುವ ಚೆನ್ನಾಲಿಂಗನಹಳ್ಳಿಯಲ್ಲಿ ಗ್ರಾಮಸ್ಥರು ಸ್ವಂತ ಹಣದಿಂದ ಪೈಪ್‌ಲೈನ್‌ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಿದ್ದಾರೆ.

ಕಣ್ಣೂರು ಗ್ರಾಮದ ಹೊಸಕೆರೆ, ಅಂಕಪ್ಪನಕಟ್ಟೆ ಕೆರೆ, ಶಾಲೆ ಸಮೀಪದ ಹೊಸಕೆರೆಗೆ ಗ್ರಾಮ ಪಂಚಾಯಿತಿಯಿಂದ ನೀರು ಭರ್ತಿ ಮಾಡಲಾಗಿದೆ. ಗುಂಡಾಲ್‌ ಜಲಾಶಯದ ಬಲದಂಡೆ ನಾಲೆಯಿಂದ ಮೋಟಾರ್‌ ಮೂಲಕ ಕೆರೆಗಳಿಗೆ ನೀರು ಹರಿಸಲಾಗಿದೆ.

ಖಾಸಗಿ ಜಮೀನು ಮಾಲೀಕರಿಂದ ದಿನವೊಂದಕ್ಕೆ ₹ 200ನಂತೆ ಬಾಡಿಗೆಗೆ ಮೋಟಾರ್‌ ಪಡೆದು ಅದರ ಮೂಲಕ 15 ದಿನದ ಅವಧಿಯಲ್ಲಿ ಗ್ರಾಮದ ಮೂರು ಕೆರೆಗಳಿಗೂ ನೀರು ತುಂಬಿಸಿರುವುದು ವಿಶೇಷ. ಇದಕ್ಕಾಗಿ ಪಂಚಾಯಿತಿಯ ಅನುದಾನ ಬಳಸಿಕೊಳ್ಳಲಾಗಿದೆ. 

‘ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದಾಗಿ ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮೂರು ಕೆರೆಗಳಲ್ಲೂ ನೀರು ಭರ್ತಿಯಾಗಿದೆ. ಕೆರೆಗಳಲ್ಲಿ ನೀರು ತುಂಬಿರುವುದರಿಂದ ಅಕ್ಕಪಕ್ಕದ ಕೊಳವೆಬಾವಿಗಳಲ್ಲೂ ಅಂತರ್ಜಲಮಟ್ಟ ವೃದ್ಧಿಸಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ’ ಎನ್ನುತ್ತಾರೆ ಗ್ರಾ.ಪಂ. ನೌಕರ ಜಗದೀಶ್‌.

‘ಬೇಸಿಗೆ ಆರಂಭವಾಗುತ್ತಿದ್ದಂತೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಕಾಡುತ್ತದೆ. ಪಂಚಾಯಿತಿಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸದ ಅಧಿಕಾರಿಗಳು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ನೆಮ್ಮದಿ ತಂದಿದೆ’ ಎನ್ನುತ್ತಾರೆ ರೈತ ತಮ್ಮಯ್ಯಪ್ಪ.

ಗ್ರಾಮಸ್ಥರ ಮಾದರಿ ಕಾರ್ಯ:  ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಚೆನ್ನಾಲಿಂಗನಹಳ್ಳಿಯಲ್ಲಿ ಗ್ರಾಮಸ್ಥರೇ ಒಟ್ಟಾಗಿ ಸೇರಿ ಸ್ವಂತ ಖರ್ಚಿನಲ್ಲಿ ಹಗಲಿರುಳು ಶ್ರಮಿಸಿ ಮೂರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮದಲ್ಲಿ ಇರುವ ಓವರ್‌ಹೆಡ್‌ ಟ್ಯಾಂಕ್‌ನ ಬಳಿ ಒಂದು ಕೆರೆಯಿದೆ. ಟ್ಯಾಂಕ್‌ ಭರ್ತಿಯಾದಾಗ ನೀರು ಕೆರೆಗೆ ಹರಿಯುತ್ತದೆ. ಹೀಗೆ ಕೆರೆಗೆ ತುಂಬಿದ ನೀರು ನಂತರ ವ್ಯರ್ಥವಾಗಿ ಹರಿದು ಹೋಗುತ್ತಿತ್ತು.  ವ್ಯರ್ಥ ನೀರನ್ನು ಪೈಪ್‌ಲೈನ್‌ ಮೂಲಕ ಇನ್ನೆರಡು ಕೆರೆಗಳಿಗೆ ತುಂಬಿಸಿದ್ದಾರೆ.

ಈ ಕಾರ್ಯಕ್ಕೆ ಗ್ರಾಮಸ್ಥರು ಸರ್ಕಾರದ ಅನುದಾನ ನಂಬಿಕೊಂಡಿಲ್ಲ. ಗ್ರಾಮದ ಪ್ರತಿಯೊಬ್ಬರಿಂದ ಹಣ ಸಂಗ್ರಹಿಸಿ ಎರಡು ಕೆರೆಗಳಿಗೂ ಪೈಪ್‌ಲೈನ್‌ ನಿರ್ಮಿಸಿ ನೀರು ತುಂಬಿಸಿದ್ದಾರೆ.

‘ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಗ್ರಾಮಸ್ಥರ ಸಹಾಯದೊಂದಿಗೆ  1 ಕಿ.ಮೀ.ಗೂ ಹೆಚ್ಚು ಉದ್ದದ ಪೈಪ್‌ಲೈನ್‌ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲಾಗಿದೆ’ ಎಂದು ಹೇಳುತ್ತಾರೆ ಚೆನ್ನಾಲಿಂಗನಹಳ್ಳಿಯ ನೀರುಗಂಟಿ ಕುಮಾರ್‌.

ಈ ಪ್ರಕ್ರಿಯೆ ಇದೇ ಮೊದಲನೇ ಬಾರಿಗೆ ನಡೆದಿದೆ. ಎಷ್ಟು ದಿನಗಳ ಕಾಲ ನೀರು ಸಂಗ್ರಹಣೆಗೊಳ್ಳಲಿದೆ ಎಂಬುದನ್ನು ಆಧರಿಸಿ ಪ್ರತಿವರ್ಷ ಈ ಯೋಜನೆ ಮುಂದುವರಿಸಿದರೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂಬುದು ರೈತರ ಒಕ್ಕೊರಲ ಅಭಿಪ್ರಾಯ.

‘ಬೇಸಿಗೆಯ ತೀವ್ರತೆ ಅರಿತು ಫೆಬ್ರುವರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗ್ರಾಮಸ್ಥರು ಸಹ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಕಣ್ಣೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ. ಮಾದೇಶ್‌.
-ಬಿ. ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT