ADVERTISEMENT

ಕೆಲಸ ವಿಳಂಬ, ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 8:31 IST
Last Updated 14 ಜುಲೈ 2017, 8:31 IST

ಗುಂಡ್ಲುಪೇಟೆ: ತಾಲ್ಲೂಕಿನ ನಾಡಕಚೇರಿಯಲ್ಲಿ ವಿವಿಧ ಕೆಲಸಗಳು ವಿಳಂಬವಾಗುತ್ತಿದ್ದ, ಇನ್ನಿಲ್ಲದ ಸಮಸ್ಯೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಪಟ್ಟಣದ ನಾಡಕಚೇರಿ ಬಳಿ ಸೇರಿದ ರೈತರು, ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬವಾಗುತ್ತಿರುವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಬೆಳೆ ವಿಮೆ, ಪರಿಹಾರಕ್ಕಾಗಿ ವಿವಿಧ ದಾಖಲೆಗಳನ್ನು ಪಡೆಯಲು ನಾಡಕಚೇರಿಗೆ ರೈತರು ಬರುತ್ತಿದ್ದಾರೆ. ಆದರೆ, ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ ಎಂಬುದು ಆರೋಪ.
‘ಕಚೇರಿಯ ಸಿಬ್ಬಂದಿ ವಿಳಂಬ ಸೇವೆಯ ಮೂಲಕ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ರೈತ ಸಂಘದ ಮಹದೇವಪ್ಪ ಆರೋಪಿಸಿದ್ದಾರೆ.

ಪಟ್ಟಣದ ತಾಲ್ಲೂಕು ಕಚೇರಿ  ಆವರಣದಲ್ಲಿ ವಿವಿಧ ದಾಖಲೆಗಳನ್ನು ಪಡೆಯಲು ಗುರುವಾರ ಬೆಳಿಗ್ಗೆ ರೈತರು  ಸಾಲಿನಲ್ಲಿ ನಿಂತಿದ್ದರು. ವಿದ್ಯುತ್ ಇಲ್ಲ, ನೆಟ್‌ವರ್ಕ್‌ ಇಲ್ಲ ಇತ್ಯಾದಿ ಕಾರಣಗಳನ್ನು ಸಿಬ್ಬಂದಿ ನೀಡಿದ್ದು, ಒಂದು ಹಂತದಲ್ಲಿ ಸಿಬ್ಬಂದಿ ಉತ್ತರ ದಿಂದ ಬೇಸತ್ತು ರೈತರು ಪ್ರತಿಭಟನೆಗೂ ಮುಂದಾದರು.

ADVERTISEMENT

ಸ್ಥಳಕ್ಕೆ ಬಂದ ತಹಶೀಲ್ದಾರ್ ಸಿದ್ದು ಅವರೂ, ರೈತರ ಕೋಪದ ಮಾತುಗಳನ್ನು ಕೇಳ ಬೇಕಾಯಿತು. ರೈತರ ಒಟ್ಟಿಗೆ ಪ್ರಶ್ನಿಸಲು ಮುಂದಾದಂತೆ ಅವರು ಕಚೇರಿಗೆ ತೆರಳಿದರು.ನಾಡಕಚೇರಿಗೆ ಅಗತ್ಯ ಆಧರಿಸಿ ಹೆಚ್ಚುವರಿ ಕಂಪ್ಯೂಟರ್‌ ಅನ್ನು ಒದಗಿಸಬೇಕು, ತ್ವರಿತಗತಿಯಲ್ಲಿ ರೈತರಿಗೆ ದಾಖಲೆ ಒದಗಿಸಬೇಕು ಎಂದು ರೈತರು ಆಗ್ರಹಪಡಿಸಿದರು.

ಬೇಗೂರಿನಲ್ಲೂ ಪರದಾಟ: ತಾಲ್ಲೂಕಿನ ಬೇಗೂರು ಗ್ರಾಮದ ನಾಡಕಚೇರಿಯಲ್ಲಿಯೂ ರೈತರು, ಜನರು ಸುದೀರ್ಘ ಕಾಲ  ಕಾಯುವಂತಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ಇದ್ದು, ಇರುವ ಒಬ್ಬನೇ ಸಿಬ್ಬಂದಿ ಬೆಳೆ ದೃಢೀಕರಣ ಪತ್ರ, ಆರ್‌ಟಿಸಿ, ಜಾತಿ ಪ್ರಮಾಣ ಪತ್ರ, ಎಂಆರ್ ಕಾಪಿ, ಖಾತೆ ಬದಲಾವಣೆ ಸ್ಕೆಚ್ ಕಾಪಿ ಸೇರಿ ವಿವಿಧ ದಾಖಲೆಗಳನ್ನು ಒದಗಿಸಬೇಕಾಗಿದೆ. ಬೇಗೂರು ಹೋಬಳಿ ಕೇಂದ್ರ. ವಿವಿಧ ಗ್ರಾಮಗಳ ಜನರು ಇಲ್ಲಿಗೆ ಬರುತ್ತಾರೆ. ಹೀಗಾಗಿ, ಇಲ್ಲಿ ಅಧಿಕ ಕೌಂಟರ್‌ಗಳನ್ನು ತೆರೆಯುವುದು ಅಗತ್ಯವಿದೆ ಎಂದು  ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.