ADVERTISEMENT

ಕೆಸರಿಗೆ ಸಿಲುಕಿದ ಹೆಣ್ಣಾನೆ ರಕ್ಷಣೆ

ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಕೃಷ್ಣಯ್ಯನ ಕಟ್ಟೆ ಬಳಿ ಘಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:35 IST
Last Updated 11 ಮಾರ್ಚ್ 2017, 7:35 IST
ಯಳಂದೂರು: ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ಹುಲಿ ರಕ್ಷಿತಾರಣ್ಯದಲ್ಲಿ ಶುಕ್ರವಾರ ಮುಂಜಾನೆ ನೀರು ಅರಸಿ ಬಂದ ಆನೆಗಳ ಹಿಂಡಿನಲ್ಲಿದ್ದ  ಹೆಣ್ಣಾನೆ ಯೊಂದು ಕೆಸರಿನಲ್ಲಿ ಸಿಲುಕಿ, ಪರಿತಪಿಸಿತು.
 
ಕೆಸರಿನಲ್ಲಿ ಸಿಲುಕಿ ಹೊರ ಬರಲಾರದೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ಗಮನಿಸಿದ ಗ್ರಾಮಸ್ಥರು  ಹಗ್ಗದಿಂದ ಎಳೆದು, ಮತ್ತೆ ಕಾಡು ಸೇರಿಸುವಲ್ಲಿ ಯಶಸ್ವಿಯಾದರು.
 
ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಕೃಷ್ಣಯ್ಯನ ಕಟ್ಟೆ ಪ್ರದೇಶ ಇಂಥದೊಂದು ಬೆಳವಣಿಗೆಗೆ ಸಾಕ್ಷಿಯಾಯಿತು. ಕೃಷ್ಣಯ್ಯನ ಕಟ್ಟೆಯು ಈ ಭಾಗದಲ್ಲಿ ವನ್ಯಜೀವಿಗಳಿಗೆ ನೀರುಣಿಸುವ ತಾಣ. ಶುಕ್ರವಾರ ಬೆಳಗಿನ ಜಾವ 4.30ರಲ್ಲಿ ನೀರು ಅರಸಿ ಆನೆಗಳ ಹಿಂಡು ಬಂದಿದ್ದು, ದಾಹ ತಣಿಸಿಕೊಳ್ಳಲು ನೀರಿಗಿಳಿದಿವೆ.
 
ಈ ಸಂದರ್ಭದಲ್ಲಿ 45 ವರ್ಷದ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿದೆ. ಕೆಸರಿನಿಂದ ಹೊರಬರಲು ಸಾಧ್ಯವಾಗದೇ ಪರಿತಪಿ ಸಿದೆ. ಕೆಸರಿನಲ್ಲಿ ದೇಹ ಸಿಲುಕಿದಂತೆ ಆಕ್ರಂದನ ಶುರುವಿಟ್ಟುಕೊಂಡಿದೆ.
 
ಆನೆಯ ಆಕ್ರಂದನ ಕೇಳಿದ ಸುತ್ತ ಮುತ್ತಲ ಜಮೀನಿನ ಮಾಲೀಕರು ಹಾಗೂ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ.  ತಾಯಿ ಬಿಟ್ಟು ಕದಕದ ಕಂದ: ಕೆಸರಿನಲ್ಲಿ ತಾಯಿ ಆನೆ ಸಿಲುಕಿ ಪರಿತಪಿಸಿದ್ದರೆ, ಅದರ ಮರಿಯು ಆಸುಪಾಸಿನಲ್ಲಿಯೇ ಇದ್ದು, ತಾಯಿ ಆನೆಯನ್ನು ಗಮನಿ ಸುತ್ತಿತ್ತು. ಸಮೀಪದಲ್ಲಿಯೇ ಘೀಳಿಡುತ್ತಾ ಅಡ್ಡಾಡಿದೆ.
 
ರೈತರಾದ ಗುಂಬಳ್ಳಿ ಸೋಮಣ್ಣ, ಯರಗಂಬಳ್ಳಿ ರಾಜಣ್ಣ, ಹಾಗೂ ಚಂದ್ರು ಅವರ ಜತೆಗೆ ಗುಂಬಳ್ಳಿ, ಯರಗಂಬಳ್ಳಿ, ದಾಸನಹುಂಡಿ, ವಡಗೆರೆ, ಕೃಷ್ಣಾಪುರ, ಕೊಮಾರನಪುರದ ಕೆಲ ಗ್ರಾಮಸ್ಥರು ಆನೆಯ ರಕ್ಷಣೆಗೆ ಮುಂದಾಗಿದ್ದಾರೆ.
 
ಸುದ್ದಿ ತಿಳಿದ ಅರಣ್ಯ ಇಲಾಖೆಯು ಸ್ಥಳಕ್ಕೆ ಕ್ರೇನ್‌ ತರಿಸಿದ್ದು, ಸುಮಾರು ನಾಲ್ಕು ಗಂಟೆ ಕಸರತ್ತಿನ ಬಳಿಕ ಆನೆಯನ್ನು ಕೆಸರಿನಿಂದ ದಾಟಿಸಿ ದಡ ಸೇರಿಸಿದ್ದು, ಆನೆ ಕಾಡು ಸೇರಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.