ADVERTISEMENT

ಕೇಂದ್ರದ ವಿರುದ್ಧ ಮೊಯಿಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 7:13 IST
Last Updated 2 ಅಕ್ಟೋಬರ್ 2014, 7:13 IST

ಚಾಮರಾಜನಗರ: ‘ಪ್ರಧಾನಿ ನರೇಂದ್ರ ಮೋದಿ ಅವರು ಕಾಲಹರಣ ಮಾಡುತ್ತಿದ್ದಾರೆ. ಜನಪರ ಯೋಜನೆ ರೂಪಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಎಂ. ವೀರಪ್ಪ ಮೊಯಿಲಿ ಟೀಕಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಅಭಿನಂದನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಲೋಕಸಭಾ ಚುನಾವಣೆಯ ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ. ನಿಸ್ವಾರ್ಥ ಸೇವೆ ಹಾಗೂ ತ್ಯಾಗ ಮನೋಭಾವದಿಂದ ಪಕ್ಷ ಸಂಘಟಿಸುವ ಶಕ್ತಿ ನಮ್ಮಲ್ಲಿದೆ ’ ಎಂದು ಹೇಳಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ದಕ್ಷ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಸೋನಿಯಾ ಅವರು ಮೂರು ಬಾರಿ ಪ್ರಧಾನಿ ಪಟ್ಟ ಹತ್ತಿರಕ್ಕೆ ಬಂದರೂ ತಿರಸ್ಕಾರ ಮಾಡಿದ್ದಾರೆ. ಅವರ ಆದರ್ಶ ಎಲ್ಲ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗೆ ಮಾದರಿಯಾಗಬೇಕು ಎಂದು ಆಶಿಸಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಆದರೆ, ಮತಗಳಿಕೆ ಪ್ರಮಾಣದಲ್ಲಿ ಕೇವಲ ಶೇ 31ರಷ್ಟು ಪಡೆದಿದೆ. ದೇಶದ ಇತಿಹಾಸದಲ್ಲಿ ಕಡಿಮೆ ಪ್ರಮಾಣದ ಮತ ಪಡೆದು ಅಧಿಕಾರ ಪಡೆದುಕೊಂಡಿರುವ ಪಕ್ಷವಾಗಿದೆ. ರಾಜ್ಯದಲ್ಲಿ ಬರಗಾಲ ತಲೆದೋರಿದೆ. ಇದುವರೆಗೂ ಕೇಂದ್ರದಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ವೀರಪ್ಪ ಮೊಯಿಲಿ ಅವರು ನಿಷ್ಠಾವಂತ ಕಾಂಗ್ರೆಸ್ ನಾಯಕರು. ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ವಾಸು, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸದಾಶಿವಮೂರ್ತಿ, ಮುಖಂಡರಾದ   ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್. ಬಾಲರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಲಲಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.