ADVERTISEMENT

ಗುಂಡ್ಲುಪೇಟೆಗೆ ಇಂದು ಸಿ.ಎಂ. ಭೇಟಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:25 IST
Last Updated 30 ಆಗಸ್ಟ್ 2017, 7:25 IST

ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಗೆಲುವಿನ ಬಳಿಕ ಏಪ್ರಿಲ್‌ನಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮೊದಲ ಬಾರಿಗೆ ತಾಲ್ಲೂಕಿಗೆ ಭೇಟಿ ನೀಡುತ್ತಿದ್ದಾರೆ.

ಕಾರ್ಯಕ್ರಮ ಸಂಬಂಧ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಜಮೀನಿನಲ್ಲಿ ಬೃಹತ್‌ ವೇದಿಕೆ ಸಜ್ಜುಗೊಂಡಿದೆ. 12,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.

ಅತಿಥಿಗಳಿಗೆ, ಮುಖಂಡರಿಗೆ ವೇದಿಕೆಯ ಮುಂಭಾಗ ಆಸನ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ಮೀಸಲಿಡಲಾಗಿದೆ. ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗಾಗಿ ಗಣ್ಯರ ಹಿಂಬದಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಸಿದ್ದರಾಮಯ್ಯ ಅವರು ಮೈಸೂರಿನಿಂದ ರಸ್ತೆ ಮಾರ್ಗದಲ್ಲಿ ಗ್ರಾಮಕ್ಕೆ ಭೇಟಿ ನೀಡುತ್ತಿರುವುದರಿಂದ ಪಟ್ಟಣದ ರಸ್ತೆಗಳನ್ನು ತರಾತುರಿಯಿಂದ ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು. ತೆರಕಣಾಂಬಿ ಗ್ರಾಮ ಪಂಚಾಯಿತಿಯಿಂದ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಸಂಸದ ಆರ್.ಧ್ರುವನಾರಾಯಣ, ಶಾಸಕಿ ಎಂ.ಸಿ. ಮೋಹನ್‌ಕುಮಾರಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಹರೀಶ್‌ಕುಮಾರ್, ತಹಶೀಲ್ದಾರ್ ಕೆ. ಸಿದ್ದು, ಲೋಕೋಪಯೋಗಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್. ವಿಜಯ ಸಾರಥಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ಸಿವಿಲ್ ಕಾನ್ ಸ್ಟೆಬಲ್ ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.