ADVERTISEMENT

ಚಾಮರಾಜೇಶ್ವರ ದೇಗುಲ ನವೀಕರಣಕ್ಕೆ ಚಾಲನೆ

ಜೀರ್ಣೋದ್ಧಾರಕ್ಕೆ ₹ 2.10 ಕೋಟಿ ಅನುದಾನ ನಿಗದಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:39 IST
Last Updated 31 ಜನವರಿ 2017, 7:39 IST
ಚಾಮರಾಜೇಶ್ವರ ದೇಗುಲ ನವೀಕರಣಕ್ಕೆ ಚಾಲನೆ
ಚಾಮರಾಜೇಶ್ವರ ದೇಗುಲ ನವೀಕರಣಕ್ಕೆ ಚಾಲನೆ   

ಚಾಮರಾಜನಗರ: ‘ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎಂಟು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಚಾಮರಾಜೇಶ್ವರ ಸ್ವಾಮಿ ದೇಗುಲದ ನವೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ನೀಡಿದ್ದರು. ಜತೆಗೆ, ಬಜೆಟ್‌ನಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹ 1 ಕೋಟಿ ಅನುದಾನ ಘೋಷಿಸಿದ್ದಾರೆ ಎಂದು ತಿಳಿಸಿದರು.

ದೇವಾಲಯದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ಬೇಕಿದೆ. ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪ್ರಸ್ತುತ ₹ 2.10 ಕೋಟಿ ಅನುದಾನದಡಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. ದೇಗುಲದ ರಾಜಗೋಪುರ, ವಿಮಾನ ಗೋಪುರ, ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಸುತ್ತಲೂ ವಿಘ್ನಗೊಂಡಿರುವ ವಿಗ್ರಹಗಳನ್ನು ನವೀಕರಣಗೊಳಿಸಲಾಗುತ್ತದೆ ಎಂದರು.

ದೇವಾಲಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರೇ ಕೆಲವು ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದರು. ಕಾಮಗಾರಿಗೆ ಈಗ ಚಾಲನೆ ನೀಡ ಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗು ವುದಿಲ್ಲ. ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಕಾರ್ಯ ಮೊದಲಿನಂತೆಯೇ ನಡೆಯ ಲಿದೆ. ನವೀಕರಣ ಕಾಮಗಾರಿಯೂ ನಡೆಯಲಿದೆ. ನಿಗದಿತ ಅಧಿಕಾರಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ದಾರರು ಮುಂದಾಗಬೇಕು ಎಂದು ಸೂಚಿಸಿದರು. ಜಿ.ಪಂ ಅಧ್ಯಕ್ಷ ಎಂ. ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಉಪಾಧ್ಯಕ್ಷ ಪಿ.ಎನ್.ದಯಾ ನಿಧಿ, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ, ತಹಶೀಲ್ದಾರ್ ಕೆ. ಪುರಂದರ, ಮಂಜೇಶ್, ರಾಮಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.