ADVERTISEMENT

ಚಿಕ್ಕಲ್ಲೂರು ಜಾತ್ರೆಗೆ ಜನಸಾಗರ

ಸುತ್ತಲಿನ ಖಾಸಗಿ ಜಮೀನುಗಳಲ್ಲಿ ಭಕ್ತರ ಬಿಡಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 7:14 IST
Last Updated 13 ಜನವರಿ 2017, 7:14 IST
ಹನೂರು: ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಜನ ಸಾಗರವೇ ಹರಿದು ಬಂದಿದ್ದು, ರಾಜ್ಯದ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆ ಯಲ್ಲಿ ಆಗಮಿಸಿರುವ ಭಕ್ತರು ದೇವಸ್ಥಾನದ ಸುತ್ತಲಿನ ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದಾರೆ.
 
ಗದ್ದಿಗೆಯಿಂದ 100 ಮೀ ವ್ಯಾಪ್ತಿ ಯಲ್ಲಿ ಯಾವುದೇ ಅಂಗಡಿ ಮಳಿಗೆ ಹಾಗೂ ಬಿಡಾರಗಳನ್ನು ನಿರ್ಮಾಣ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಭಕ್ತರು ಖಾಸಗಿ ಜಮೀನುಗಳಲ್ಲಿ ಬಿಡಾರಗಳನ್ನು ನಿರ್ಮಿಸಿ ಕೊಂಡು ವಾಸ್ತವ್ಯ ಹೂಡಿದ್ದು, ಪಂಕ್ತಿ ಸೇವೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಚಿಕ್ಕಲ್ಲೂರು ಕ್ಷೇತ್ರದಿಂದ ಜಿಲ್ಲಾಡಳಿತದವರೆಗೆ ಪಾದಯಾತ್ರೆ ನಡೆಸಿದೆ.  
 
ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಬಾಣೂರು, ತೆಳ್ಳನೂರು ಹಾಗೂ ರಾಚಪ್ಪಾಜಿನಗರ ಮುಂತಾದ ಮೂರು ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿ ವಾಹನವನ್ನು ತಪಾಸಣೆ ನಡೆಸ ಲಾಗುತ್ತಿದೆ.­
 
ಇದರ ಬೆನ್ನಲ್ಲೇ ಪರಂಪರಾ ಹೋರಾಟ ರಕ್ಷಣಾ ಸಮಿತಿಯ ಕಾರ್ಯ ಕರ್ತರು ಸಹ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರಿಗೆ ತಮ್ಮ ಸೇವೆಗಳನ್ನು ಮಾಡು ವುದರ ಜೊತೆಗೆ ಕೋರ್ಟ್‌ನ ಆದೇಶ ವನ್ನು ಸಹ ಗೌರವಿಸಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದುದು ಕಂಡು ಬಂತು.
 
ಸೂಕ್ತ ಭದ್ರತೆ: ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ 2 ಡಿಎಸ್‌ಪಿ, 10 ಇನ್‌ಸ್ಪೆಕ್ಟರ್‌, 15 ಪಿಎಸ್ಐ, 50 ಎಎಸ್ಐ, 54 ಹೆಡ್‌ಕಾನ್‌ಸ್ಟೆಬಲ್‌, 135 ಕಾನ್‌ಸ್ಟೆಬಲ್‌, 250 ಗೃಹರಕ್ಷಕದಳ ಸಿಬ್ಬಂದಿ, 2 ಕೆಎಸ್ಆರ್‌ಪಿ ಹಾಗೂ 8 ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯನ್ನು  ನಿಯೋಜಿಸಲಾಗಿದೆ.
 
**
ಕೋರ್ಟ್‌ ಆದೇಶದಂತೆ ಜಿಲ್ಲಾಡಳಿತ 1 ಕಿ.ಮೀ ಆಚೆಗೆ ಪಂಕ್ತಿಸೇವೆಗೆ ಅವಕಾಶ ಕಲ್ಪಿಸಿದೆ. ಆದರೆ ಬಾಣೂರು ಕ್ಷೇತ್ರದಿಂದ 2.5 ಕಿ.ಮೀ ಇದ್ದು, ಅಲ್ಲೇ ಭಕ್ತರನ್ನು ತಡೆಯುತ್ತಿರುವುದು ಸರಿಯಲ್ಲ
-ಎನ್. ಮಹೇಶ್,
ಅಧ್ಯಕ್ಷ, ಪರಂಪರೆ ರಕ್ಷಣಾ ಹೋರಾಟ ಸಮಿತಿ
 
**
ಮಾಂಸಾಹಾರ ನಮ್ಮ ಸಂಸ್ಕೃತಿ
ಹನೂರು: ನಮ್ಮ ದೇವರಿಗೆ ಮಾಂಸಾಹಾರದ ಎಡೆ ಕೊಡುವುದು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯ. ಆದರೆ ಅದನ್ನು ಪ್ರಾಣಿಬಲಿ ಎಂದು ಬಿಂಬಿಸುವ ಮೂಲಕ ಭಕ್ತರ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ನಮ್ಮ ಕುಟುಂಬ ನೂರಾರು ವರ್ಷಗಳಿಂದಲೂ ಇದನ್ನು ಅನುಸರಿಸಿಕೊಂಡು ಬಂದಿದ್ದು  ನಾವು ಅದನ್ನು ಮುಂದುವರಿಸಿದ್ದೇವೆ’ ಎನ್ನುತ್ತಾರೆ ಶಿವನಸಮುದ್ರ ಬಳಿಯ ನೆಟ್ಟಕಲ್ಲು ಗ್ರಾಮದ ನಾಗರಾಜು ಮತ್ತು ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.