ADVERTISEMENT

ಜನಪದ ಹಕ್ಕಿಗೆ ಎಪ್ಪತ್ತರ ಸಂಭ್ರಮ

ದೇಸಿ ಸಾಧಕರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 6:13 IST
Last Updated 28 ಡಿಸೆಂಬರ್ 2016, 6:13 IST
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದ ವಸಗೆ ಪದ ಹಾಡುವ ಹಾಲಮ್ಮ ಸಹಚರರು ಜೊತೆ ಇದ್ದಾರೆ
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದ ವಸಗೆ ಪದ ಹಾಡುವ ಹಾಲಮ್ಮ ಸಹಚರರು ಜೊತೆ ಇದ್ದಾರೆ   

ಯಳಂದೂರು: ಬೀಸುವ ಪದ ಚಂದ
ಕೂಸಿನ ದನಿ ಚಂದ
ನವಿಲಾಡೊ ನಮ್ಮ ವನಚಂದ
ಚನ್ನಿಗರ ಬೆವರೀನ ಗಂಧ ಬಲುಚಂದ...


ಇದು ಹಾಲಮ್ಮನ ಆಲಾಪ. ಅಮ್ಮ ಇನ್ನೊಂದು ಪದಹಾಡು ಎಂದರೆ, ಅಮ್ಮನ ಮಾತೃ ಹೃದಯದಿಂದ ತೊಟ್ಟಿಲು ತೂಗುವ ಹಾಡು ಹಳ್ಳಿಯ ನೀರವತೆಯನ್ನು ತಟ್ಟನೆ ಎಚ್ಚರಿಸುವ ದನಿಯೊಂದಿಗೆ ಪದಗಳು ಸಾಲುಗಳಾಗಿ, ಸಾಲು ಹಾಡಾಗಿ ಕೇಳುಗರ ಕರ್ಣ ತಣಿಸುತ್ತದೆ.

ಹೌದು. ತಾಲ್ಲೂಕಿನ ಉಪ್ಪಿನ ಮೋಳೆಯಲ್ಲಿ ಬಹುಪಾಲು ಉಪ್ಪಾರ ಜನಾಂಗವೇ ನೆಲೆಸಿದೆ. ಇಲ್ಲಿ 70 ವಸಂತಗಳನ್ನು ಕಂಡಿರುವ ಜನಪದ ಗಾಯನದ ಒಡತಿ ಹಾಲಮ್ಮ ಅವರಿಗೆ ಹಾಡು–ಹಸೆ ಅಮ್ಮನ ಬಳುವಳಿಯಾಗಿ ಬಂದಿದೆ. ಎಳೆ ವಯಸ್ಸಿನಲ್ಲಿ ನಾಟಿ ಆಡುವಾಗ, ಪೌರಾಣಿಕ ನಾಟಕಗಳನ್ನು ನೋಡುವಾಗ ಮತ್ತು ತೊಟ್ಟಿಲು ತೂಗುವಾಗ ಇವರು ಕಂಡ ಅಂದಿನ ದಿನಗಳ ಶಾಸ್ತ್ರೀಯ ಜೋಗುಳ ಇವರ ಮನದಾಳದಲ್ಲಿ ಮೈದಳೆದಿದೆ. ಇದೇ ಇವರ ಬಾಯಲ್ಲಿ ಜನಪದವಾಗಿ ಇಂದಿಗೂ ಉಳಿದಿದೆ.

ಅಂದಿನ ರೂಢಿಗತ ನಂಬಿಕೆಗಳು, ಆಚಾರ – ವಿಚಾರ, ಸಂಪ್ರದಾಯ, ಹೆಣ್ಣು ಗಂಡಿನ ಒಲವು, ವಸಗೆಪದ ಸೇರಿದಂತೆ ತುಂಟ ಮಕ್ಕಳನ್ನು ಹಸೆಗೆ ಕೂರಿಸುವಾಗ ಅವರನ್ನು ದೈವತ್ವಕ್ಕೆ ಏರಿಸುತ್ತಲೇ ಅವರಿಗೆ ನೈತಿಕ ಮಾರ್ಗ ತೋರುವ ಗ್ರಾಮೀಣರ ಹಾಡಿಗೆ ಇನ್ನಿಲ್ಲದ ಮಹತ್ವ ತಂದುಕೊಡುತ್ತದೆ.

ಅಜ್ಜಿ ಹಾಲಮ್ಮನವರ  ಜೊತೆ ನಿಂತು ಹತ್ತಾರು ಯುವತಿಯರು ಈಗಲೂ ಇವರ ಜನಪದ ಸಾಹಿತ್ಯದ ಭಾಗವಾಗು ತ್ತಾರೆ. ಸೋಬಾನೆ ಮತ್ತು ತೊಟ್ಟಿಲ ಪದಕ್ಕೆ ಜನಪದರ ಸೊಗಡಿದೆ. ಮುಂದಿನ ಪೀಳಿಗೆಗೆ ದಾಟಿಸುವ ತವಕವೂ ಇರುತ್ತದೆ. ಇಂತಹ ಸೊಗಸಾದ ಪದಪುಂಜಕ್ಕೆ ಶಿಷ್ಟ ಭಾಷೆ ಇಲ್ಲ. ಅಗಣಿತ  ದನಿಯ ಲಲನೆಯರೇ  ಜೀವ ತುಂಬುತ್ತಾರೆ. ಇಂಥವರು ಇನ್ನೂ ಇದ್ದರೆ, ಹಾಲಮ್ಮ ಅವರಿಗೆ ಮೊದಲ ನಮನ ಸಲ್ಲಿಸಬೇಕು ಎನ್ನುತ್ತಾರೆ ವಾರಿಗೆಯ ಕೆಂಪಮ್ಮ.

ಊರಾಚೆಯ ನಗರವೇ ಇರಲಿ, ಪಟ್ಟಣವೇ ಇರಲಿ ಇಲ್ಲವೇ ದೂರದ ಮೈಸೂರು ನಗರವೇ ಆಗಿರಲಿ, ಮಕ್ಕಳ ವಿವಾಹಕ್ಕೆ ಇವ ರಿಂದಲೇ ಸೋಬಾನೆ ಹಾಡಿ ಸುವ ಮಂದಿ ಇದ್ದಾರೆ. ಇವರ ಪದಕ್ಕೆ ಚಿಕ್ಕ ಬಸಮ್ಮ, ಕೆಂಪಮ್ಮ ಅವರು ಸೊಲ್ಲು ಹಾಕುತ್ತಾರೆ.

ಇವರ ಗಾನ ಸುಧೆ ಹಳ್ಳಿಯ ಹಜಾರ ಬಿಟ್ಟು ನಗರ ಮುಟ್ಟಿದೆ. ಈಚೆಗೆ ಬಹು ಪಾಲಿ ಛತ್ರಗಳಲ್ಲಿ ಮದುವೆ ಮಾಡಿದರೂ ಇವರನ್ನು ಕರೆದೊಯ್ಯುವವರಿಗೆ ಕೊರತೆ ಇಲ್ಲ ಎನ್ನುತ್ತಾರೆ ಗ್ರಾಮದ ಶಾಂತರಾಜು. 

ಯಾರಿಗೆ ಬೇಕಿದೆ ಜನಪದ?: ನಾನು ಒಮ್ಮೊಮ್ಮೆ ಒಗಟನ್ನು ಜನಪದ ಹಾಡಿನ ಮೂಲಕ ಮುಟ್ಟಿಸುವ ಆಸೆ ಹೊತ್ತಿದ್ದೆ. ಊರ ಮಂದಿಯ ಮಕ್ಕಳನ್ನು ಹತ್ತಿರ ಕರೆದು ಕಲಿಸಲು ಪ್ರಯತ್ನಿಸಿದೆ. ಯಾರು ಆಸಕ್ತಿ ತಳೆಯಲಿಲ್ಲ. ಯಾರಿಗೆ ಬೇಕು ನಿನ್ನ ಪದ? ಎಂದವರೇ ಹೆಚ್ಚು. ಇಂದಿನ ಧಾವಂತದ ಬದುಕಿನಲ್ಲಿ ನಮ್ಮವರ ಅಸ್ತಿತ್ವ ಇರುವುದೇ ಮಾದಪ್ಪ, ರಂಗಪ್ಪ, ಸಿದ್ದಪ್ಪಾಜಿಯವರ ಜೀವನ ವೃತ್ತಾಂತ ಸಾರುವಲ್ಲಿ. ಇದು ಸಾಮಾಜಿಕ ಸಾಮ ರಸ್ಯವೂ ಹೌದು. ಉತ್ತಮ ನೀತಿ ಮಾರ್ಗ ತೋರಿಸುತ್ತದೆ ಎನ್ನುತ್ತಾರೆ ಹಾಲಮ್ಮ.

ಕೆಂಪಯ್ಯನ ತೋಟದಲ್ಲಿ
ಗುಂಪು ಮಲ್ಲಿಗೆ ಗಿಡಹುಟ್ಟಿ
ಎಸಳು ಎಂಬತ್ತು: ಕುಸುಲು ಮೂವತ್ತು
ಬೀದಿ ಬಿತ್ತಾರ; ನಡುವೆ ಚಿತ್ತಾರ


ಎಂಬ ಒಗಟನ್ನು ಹಾಲಮ್ಮ ಕಟ್ಟಿದರು. ಆಲಿಸಿದ ಯಾರು ಉತ್ತರ ಕೊಡದಿದ್ದಾಗ ‘ಚಂಡು ಮಲ್ಲಿಗೆ’ ಎಂದರು. ಹೀಗೆ, ಪ್ರಶ್ನಿಸುತ್ತಲೇ ನಮ್ಮವರಿಗೆ ತಮ್ಮ ಜೀವನ ಅನುಭವದ ಪಾಠಗಳನ್ನು, ರೂಢಿಗತ ನಂಬಿಕೆಗಳನ್ನು ಜಾನಪದ ಸಾಹಿತ್ಯದ ಹಿನ್ನಲೆಯಲ್ಲಿ ಉಳಿಸಿಕೊಂಡು ಬಂದಿರುವ ಇವರು ‘ನಮ್ಮೂರ ಜನಪದ ಹಾಡುಗಾರ್ತಿ’ ಎಂದು ಊರ ಮಂದಿ ಎದೆಮುಟ್ಟಿ ಹೇಳುತ್ತಾರೆ.
- ನಾ. ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.