ADVERTISEMENT

ಜನರ ಸಮಸ್ಯೆಗೆ ಸ್ಪಂದನೆ; ಮೋಹನ್‌ಕುಮಾರಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:35 IST
Last Updated 14 ಏಪ್ರಿಲ್ 2017, 8:35 IST

ಚಾಮರಾಜನಗರ: ‘ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಕುಡಿಯುವ ನೀರು ಪೂರೈಕೆ ಮತ್ತು ಕೆರೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ. ಮೋಹನ್‌ಕುಮಾರಿ ಹೇಳಿದರು.

ಮತಎಣಿಕೆ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಹದೇವಪ್ರಸಾದ್‌ ಅವರೊಂದಿಗೆ 33 ವರ್ಷ ಜೊತೆಗಿದ್ದೆ. ಅವರ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದೆ. ನಾನು ಗೂಟದ ಕಾರಿಗೆ ಆಸೆಪಟ್ಟವಳಲ್ಲ. ನಮ್ಮ ಮನೆಯಲ್ಲಿ ಸಾಕಷ್ಟು ಕಾರುಗಳಿವೆ. ಆದರೆ, ಬಿಜೆಪಿ ಸಂಸದ ಪ್ರತಾಪ ಸಿಂಹ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಅವರನ್ನು ಕ್ಷಮಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಮಹದೇವಪ್ರಸಾದ್‌ ಅವರ ಕಾರ್ಯವೈಖರಿ ಬಗ್ಗೆ ನನಗೆ ಅರಿವು ಇದೆ. ಅವರು ಜನರಿಗೆ ಸ್ಪಂದಿಸುತ್ತಿದ್ದ ರೀತಿಯನ್ನು ನೋಡಿದ್ದೇನೆ. ಹಾಗಾಗಿ, ನನಗೆ ಯಾವುದೇ ಕಷ್ಟವಾಗುವುದಿಲ್ಲ’ ಎಂದರು.

ಗುಂಡ್ಲುಪೇಟೆ ತಾಲ್ಲೂಕಿನ 131 ಹಳ್ಳಿಗಳಿಗೆ ನೀರು ತುಂಬಿಸುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದ ಅವರು, ನನ್ನ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್‌, ಯು.ಟಿ. ಖಾದರ್‌ ಸೇರಿದಂತೆ ಪಕ್ಷದ ಎಲ್ಲ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ. ಕಾರ್ಯಕರ್ತರ ಶ್ರಮ ಹೆಚ್ಚಿದೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ನಾನು ಮೈಸೂರಿನಲ್ಲಿಯೇ ಉಳಿಯುತ್ತೇನೆ ಎಂಬ ಟೀಕೆ ಸರಿಯಲ್ಲ. ನನ್ನ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಕೂಡ ಕುವೆಂಪುನಗರದಲ್ಲಿಯೇ ವಾಸವಾಗಿದ್ದಾರೆ. ಅನುಕಂಪದ ಜತೆಗೆ ಮಹದೇವಪ್ರಸಾದ್‌ ಅವರ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಕಾರಣವಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಗೆಲುವು; ಸಂಭ್ರಮಾಚರಣೆ
ಯಳಂದೂರು:
ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಕಾರಣ ಪಟ್ಟಣ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂಭಾಗ ಪಕ್ಷದ ಕಾರ್ಯಕರ್ತರು ಗುರುವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ವೈ.ವಿ.ಉಮಾಶಂಕರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಜನಪರ ಆಡಳಿತವನ್ನು ನೀಡಿದೆ. ಸರ್ಕಾರ ಮಾಡಿರುವ ಸಾಧನೆಗಳೇ ಈ ಚುನಾವಣೆಗೆ ಮಾನದಂಡವಾಗಿತ್ತು ಎಂದರು. ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.