ADVERTISEMENT

ಜೀವವಿಜ್ಞಾನ ಶಿಕ್ಷಕರಿಗೆ ಕಾಡಿನಲ್ಲಿ ‘ಪರಿಸರ ಪಾಠ’

ಪರಿಸರ ಮಹತ್ವ ಅರಿವಿಗೆ ‘ಆರ್ಕಿಡ್‌ ಮತ್ತು ಪುಷ್ಪ, ಪತಂಗಗಳ ಅಧ್ಯಯನ’

ನಾ.ಮಂಜುನಾಥ ಸ್ವಾಮಿ
Published 24 ಸೆಪ್ಟೆಂಬರ್ 2017, 8:27 IST
Last Updated 24 ಸೆಪ್ಟೆಂಬರ್ 2017, 8:27 IST
ಪೊದೆಗಳ ನಡುವೆ ಅರಳಿದ ಸಸ್ಯ ವೈವಿದ್ಯತೆಗಳ ಹುಡುಕಾಟದಲ್ಲಿ ಶಿಕ್ಷಕಿಯರ ತಂಡ
ಪೊದೆಗಳ ನಡುವೆ ಅರಳಿದ ಸಸ್ಯ ವೈವಿದ್ಯತೆಗಳ ಹುಡುಕಾಟದಲ್ಲಿ ಶಿಕ್ಷಕಿಯರ ತಂಡ   

ಯಳಂದೂರು: ಪ್ರಕೃತಿ ಕೂಡಾ ಶಿಕ್ಷಕಿಯೇ! ಕಾನನದ ಹಾದಿ, ಇಕ್ಕೆಲೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಪ್ರಕೃತಿ ಮಾತೆ ನಿಶ್ಯಬ್ಧದ ನಡುವೆಯೂ ಬೋಧಿಸುವ ಪಾಠ ಅರ್ಥವಾಗುತ್ತದೆ.

ನಾಲ್ಕು ಗೋಡೆಗಳ ನಡುವೆ ಕಲಿಸುವ ಶಿಕ್ಷಕರೂ ಪ್ರಕೃತಿ ಮಾತೆ ಬೋಧನೆಗೆ ಕಿವಿಗೊಟ್ಟರೆ ಮಕ್ಕಳ ಕಲಿಕೆಗೆ ಮತ್ತಷ್ಟು ಸಿದ್ಧಿಸಬಹುದು.

ಇದನ್ನು ಸಾಕಾರಗೊಳಿಸಲು ಜೀವ ವಿಜ್ಞಾನ ವಿಷಯದ ಶಿಕ್ಷಕರಿಗೆ ‘ಪರಿಸರ ಮಹತ್ವ’ ಮನಗಾಣಿಸುವ ಪ್ರಯತ್ನ ಈಚೆಗೆ ನಡೆಯಿತು.

ADVERTISEMENT

ತಾಲ್ಲೂಕಿನ ಬಿಳಿಗಿರಿಬನದ ವಿಜಿಕೆಕೆ ಆವರಣದಲ್ಲಿ ನಡೆದ ಒಂದು ದಿನದ ‘ಆರ್ಕಿಡ್‌ ಮತ್ತು ಪುಷ್ಪ ಪತಂಗಗಳ ಜೀವ ಸಂಕುಲಗಳ ಅಧ್ಯಯನ’ ಕಾರ್ಯಗಾರದಲ್ಲಿ ಪ್ರೌಢಶಾಲಾ ಆಧ್ಯಾಪಕರಿಗೆ ತರಬೇತಿ ನೀಡಲಾಯಿತು.

‘ನೆಲಬೇವು, ನೆಲತೆಂಗು, ಕಾಡು ಕರಿಬೇವು, ಕಾಡು ಕೊತ್ತಂಬರಿ ಬಹುತೇಕ ಕಾಣಸಿಗುವುದೇ ದುರ್ಲಭ. ಪಂಚಪತ್ರೆ, ತೊರೆಮಾವು ಕಾಣೆಯಾಗುತ್ತಿವೆ. ಎತ್ತರ ಪ್ರದೇಶದಲ್ಲಿ ಅಂಕುರಿಸುವ ಡ್ರಾಸೆರಾ ಸಸ್ಯ ಕೀಟಗಳನ್ನು ಸೆರೆ ಹಿಡಿಯುತ್ತದೆ.

'ಫರ್ನ್ ಜಾತಿಯ ಬಾಟ್ರಿಕಿಯಂ ಗಿಡಗಳು ಅಳಿವಿನಂಚಿನ ಪ್ರಭೇದ’ ಇವುಗಳನ್ನು ರಕ್ಷಿಸಬೇಕಾದ ಜರೂರು ಬಂದೊದಗಿದೆ ಎನ್ನುತ್ತಾರೆ ಮಾಹಿತಿ ನೀಡಿದ ಸಸ್ಯತಜ್ಞ ರಾಮಾಚಾರಿ ಅವರು.

ಬೋಳು ಗುಡ್ಡದಲ್ಲಿ ಹಸಿರಿನದರ್ಶನ. ವೃಕ್ಷಗಳ ಮೇಲೆ ಪಸ್ಸೆಗಳ ಮೊಳೆಯುವಿಕೆ. ಮುಗಿಲು ಚುಂಬಿಸುವ ಮೇಘಗಳ ಸಾಲು, ಮನಕ್ಕೆ ಆಹ್ಲಾದ ತುಂಬುವ ತೇವಾಂಶ. ಕೆರೆ, ಸರೋವರ, ನದಿಗಳ ಬಗ್ಗೆ ಸಂವಾದ ನಡೆಸಲಾಯಿತು.

ಮಳೆಗಾಲದ ಸಂಭ್ರಮವನ್ನು ಶಿಕ್ಷಕರು ಮಕ್ಕಳಿಗೆ ಪರಿಸರ ಪಾಠವನ್ನು ಕಲಿಸಲು ವೇದಿಕೆ ಮಾಡಿಕೊಳ್ಳಬಹುದು. ನಮ್ಮ ಸುತ್ತಮುತ್ತ ಗರಿ ಬಿಚ್ಚುವ ಗರಿಕೆಯಿಂದ, ಗ್ರಾಮೀಣ ಭಾಗಗಳಲ್ಲಿ ಕೊಡೆ ತೆರೆಯುವ ಅಣಬೆ ತನಕ ಜ್ಞಾನದ ದಿಗಂತವನ್ನು ತೆರೆಯಬಹುದು. ಪಠ್ಯದ ಸಿದ್ಧ ಕಲಿಕೆಯನ್ನು ಹೊಸ ಜಗತ್ತಿನ ವಿಸ್ಮಯಗಳೊಂದಿಗೆ ಚಿಣ್ಣರನ್ನು ಮುಖಾಮುಖಿ ಆಗಿಸುವುದೇ ನಿಜವಾದ ಕಲಿಕೆ ಎಂಬ ಅಭಿಪ್ರಾಯ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.

‘ಇಂದಿನ ವಿದ್ಯಾರ್ಥಿಯನ್ನು ನಿಸರ್ಗದ ಜತೆಗೆ ಬೆಸೆದು ಅಭಿಮಾನ ಬೆಳೆಸಬೇಕು. ಶಿಕ್ಷಕರು ಕೀಟ, ಹೂ, ಸಸ್ಯ, ವನ್ಯ ಲೋಕವನ್ನು ಪರಿಚಯಿಸುವ ವೇದಿಕೆಯಾಗಿದೆ’ ಎನ್ನುವ ಮಾತು ಬಿಇಒ ಮಲ್ಲಿಕಾರ್ಜುನ ಅವರದು.

‘ನಾಲ್ಕು ಗೋಡೆಗಳ ನಡುವೆ ಕಳೆದು ಹೋಗಿರುವ ಶಿಕ್ಷಕ ಸಮುದಾಯ ಬಿಸಿಲು ದಾರಿಯ ಮರ ನೆರಳ ನಡುವಿನ ಅನುಭವದ ಅಪ್ಪುಗೆಯ ನಡುವೆ ಕಲಿತು ಬೋಧಿಸಿದರೆ, ಎಳೆಯರ ಪ್ರತಿ ಬಿಂಬದಲ್ಲೂ ಕಲಿಕೆ ಅಚ್ಚಾಗುತ್ತದೆ’ ಎನ್ನುವ ಮಾತನ್ನು ಬಿಚ್ಚಿಟ್ಟವರು ಕೊಳ್ಳೆಗಾಲದ ಶಿಕ್ಷಕ ಶಿವಶಂಕರ್.

ಳಂದೂರು ಅರಣ್ಯ ವಲಯ 565 ಚದರ ಕಿಲೋ ಮೀಟರ್‌ ವ್ಯಾಪಿಸಿದೆ. ಸೆಪ್ಟೆಂಬರ್‌ನಲ್ಲಿ ಬಿದ್ದ ಮಳೆಗೆ ಗಿರಿ ಶಿಖರಗಳು ಹಸಿರಾಗಿವೆ. ಅಭಯಾರಣ್ಯದಲ್ಲಿ 60 ಹುಲಿಗಳ ಆವಾಸವನ್ನು ಗುರುತಿಸಲಾಗಿದೆ.

‘ಕಾನನದಲ್ಲಿ ಜೀವಜಲ ನೀನಾದ ಹೊಮ್ಮಿಸಿದೆ. ಕಾಡು ಸಂರಕ್ಷಣೆಗೆ 25 ತಂಡಗಳು ಸಕ್ರೀಯವಾಗಿವೆ. ರಸ್ತೆ ಮತ್ತು ಕರೆ ಕಟ್ಟೆಗಳ ಬಳಿ ಅಧ್ಯಯನಕ್ಕೆ ಬೇಕಾದ ಸಸ್ಯ ನಮೂನೆಗಳು ಅರಳಿವೆ. ಇವುಗಳನ್ನು ಉಳಿಸುವತ್ತ ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿ ಹೇಳಬೇಕು’ ಎನ್ನುತ್ತಾರೆ ಮಾರ್ಗದರ್ಶಕರಾದ ಆರ್‌ಎಫ್ಒ ಮಹಾದೇವಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.