ADVERTISEMENT

ಡೆಂಗಿ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ

ಕಿವಿ, ಮೂಗು, ಗಂಟಲು ತಜ್ಞ ಡಾ. ಎ.ಆರ್. ಬಾಬು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:55 IST
Last Updated 13 ಜುಲೈ 2017, 9:55 IST

ಚಾಮರಾಜನಗರ: ‘ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡೆಂಗಿ, ಚಿಕೂನ್‌ಗುನ್ಯಾ ಸೇರಿದಂತೆ ಇತರೆ ಸೋಂಕು ಜ್ವರಗಳನ್ನು ತಡೆಗಟ್ಟಲು ಸಾರ್ವಜನಿಕರು ಮುಂಜಾಗ್ರತಾ ಕ್ರಮ ಅನುಸರಿಸಬೇಕು’ ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಎ.ಆರ್. ಬಾಬು ಸಲಹೆ ನೀಡಿದರು.

‘ಡೆಂಗಿ ಜ್ವರ ವೈರಸ್‌ನಿಂದ ಹರಡುವ ಒಂದು ಸೋಂಕು ರೋಗ. ಈಡೀಸ್‌ ಎಂಬ ಹೆಣ್ಣು ಸೊಳ್ಳೆ ಬೆಳಗಿನ ಜಾವದಲ್ಲಿ ಕಚ್ಚುವುದರಿಂದ ಈ ಜ್ವರ ಹೆಚ್ಚಾಗಿ ಹರಡುತ್ತದೆ. ಈ ಸೊಳ್ಳೆಗಳು ನೀರಿನ ತೊಟ್ಟಿಗಳು ಮತ್ತು ಮನೆ ಸುತ್ತಲಿನ ಪ್ರದೇಶದಲ್ಲಿ ನಿಂತಿರುವ ನೀರಿನಲ್ಲಿ ವಾಸಿಸುತ್ತವೆ. ಹಾಗಾಗಿ, ಸಾರ್ವಜನಿಕರು ನಿಂತ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಕೂನ್‌ಗುನ್ಯಾ, ಡೆಂಗಿ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳ ಲಕ್ಷಣಗಳಲ್ಲಿ ಹಲವು ಸಾಮ್ಯತೆಗಳಿವೆ. ಜ್ವರ, ಸಂಧಿ ನೋವು ಕಾಣಿಸಿಕೊಳ್ಳುತ್ತವೆ. ಜ್ವರ ಏಕಾಏಕಿ ಕಾಣಿಸಿಕೊಂಡು 1–2 ದಿನಗಳಲ್ಲಿ ಕಡಿಮೆಯಾಗಿ ಮತ್ತೆ ಒಂದೆರಡು ದಿನಗಳಲ್ಲಿ ಮರುಕಳಿಸುತ್ತದೆ. 5–6 ದಿನಗಳ ಕಾಲ ಜ್ವರ ಬಂದು ತಾನಾಗಿಯೇ ವಾಸಿಯಾಗುತ್ತದೆ ಎಂದು ವಿವರಿಸಿದರು.

ADVERTISEMENT

ಡೆಂಗಿ ಜ್ವರದ ಲಕ್ಷಣ: ವಿಪರೀತ ತಲೆನೋವು, ಸಂಧಿ, ಸ್ನಾಯುಗಳಲ್ಲಿ ನೋವು, ಕಣ್ಣುನೋವು, ಮೈಕಡಿತ, ಹೆಚ್ಚಿನ ಜ್ವರ, ಚಿಕ್ಕ ಮಕ್ಕಳಿಗೆ ಶೀತ, ಬೇಧಿ, ತುರಿಕೆ ಮತ್ತು ತೀವ್ರ ರಕ್ತ ಸ್ರಾವ ಮತ್ತು ರಕ್ತದ ಒತ್ತಡ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತವೆ. ಇದರಿಂದಾಗಿ ಬಿಳಿರಕ್ತ ಕಣಗಳ ಸಂಖ್ಯೆ ಇಳಿಕೆಯಾಗುವುದು.

ಚಿಕೂನ್‌ಗುನ್ಯಾದ ಲಕ್ಷಣ:  ಮುಖ, ಎದೆಯ ಭಾಗದಲ್ಲಿ ಕೆಂಪು ಗುಳ್ಳೆಗಳು ಹಾಗೂ ಜ್ವರ ಕಾಣಿಸಿಕೊಳ್ಳುತ್ತದೆ. ಈ ಗುಳ್ಳೆಗಳಿಂದ ರಕ್ತಸ್ರಾವವೂ ಆಗಬಹುದು. ಮಲೇರಿಯಾದಲ್ಲಿ ಮೈಕೈ ನೋವು, ಸಂಧಿ ನೋವು, ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ನಾಗರ್ಜುನ್‌, ಡಾ.ಸಿ.ಎಂ. ರಾಜೇಂದ್ರ, ಜೆಎಸ್ಎಸ್‌ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಮಂಜುನಾಥ್‌ ಹಾಜರಿದ್ದರು.
ಜಾಗೃತಿ ಜಾಥಾಕ್ಕೆ ಜನರ ಸಾಥ್‌

ಯಳಂದೂರು: ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಡೆಂಗಿ ಜನಜಾಗೃತಿ ಮೂಡಿಸುವ ಜಾಥಾ ಪಟ್ಟಣಿಗರ ಗಮನ ಸೆಳೆಯಿತು.

ಜಾಥಾಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಯ್ಯ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ್ ಮಾತನಾಡಿದರು.

ಡೆಂಗಿ ಜ್ವರ ವೈರಸ್‌ನಿಂದ ಹರಡುವ ಸೋಂಕು. ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಆ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಜನರಿಗೆ ಡೆಂಗಿ ಜ್ವರದ ಕುರಿತು ಅರಿವು ಮೂಡಿಸುವ ಮೂಲಕ ರೋಗದ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಜೆಎಸ್ಎಸ್ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಅರಿವು ಜಾಥಾ ರಾಷ್ಟ್ರೀಯ ಹೆದ್ದಾರಿ 209 ರಸ್ತೆ ಮೂಲಕ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಜ್ವರದ ನಿಯಂತ್ರಣದ ಕುರಿತು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ, ಜಿಲ್ಲಾ ಮಟ್ಟದ ಮಲೇರಿಯಾ ಅಧಿಕಾರಿ ಡಾ. ಅನಿಲ್‌ಕುಮಾರ್, ತಾ.ಪಂ ಸದಸ್ಯ ನಾಗರಾಜು, ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರೇಮ್‌ಕುಮಾರ್, ಪ.ಪಂ ಮುಖ್ಯಾಧಿಕಾರಿ ಉಮಾಶಂಕರ್ ಸೇರಿದಂತೆ ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಸ್ವಚ್ಛತೆ ಕಾಪಾಡಿ
ಹನೂರು:
ಡೆಂಗಿ ರೋಗಕ್ಕೆ ನಿಖರವಾದ ಔಷಧೋಪಚಾರ ಇಲ್ಲ. ಆದರೂ ಸರಿಯಾದ ಮತ್ತು ಪೂರ್ವಭಾವಿ ಚಿಕಿತ್ಸೆಯನ್ನು ನೀಡಿದರೆ ರೋಗದ ಲಕ್ಷಣಗಳನ್ನು ಪರಿಹರಿಸಿದರೆ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು ಎಂದು ವೈದ್ಯಾಧಿಕಾರಿ ಶ್ರುತಿ ಹೇಳಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಮೀಪದ ಕೌದಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಡೆಂಗಿ ವಿರೋಧಿ ಮಾಸಾಚರಣೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಡೆಂಗಿ ಜ್ವರ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನೆಯಲ್ಲಿರುವ ನೀರು ಶೇಖರಣೆ ತೊಟ್ಟಿಗಳು, ಹೂವಿನಕುಂಡ, ಮನೆ ಸುತ್ತ ಬಿಸಾಡಿದ ಪಿಂಗಾಣಿ, ಪ್ಲಾಸ್ಟಿಕ್ ಡಬ್ಬಗಳು ಮುಂತಾದ ವಸ್ತುಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಪೋಷಕರು ಹಾಗೂ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದ್ದಕ್ಕಿದ್ದಂತೆ ತೀವ್ರ  ಜ್ವರ ಹಾಗೂ ತಲೆನೋವು, ಮೈ–ಕೈ ನೋವು ಹಾಗೂ ಕೀಲುನೋವು ಹಾಗೂ ವಾಂತಿ, ವಾಕರಿಕೆ ಬರುವುದು  ಡೆಂಗಿ ಜ್ವರರ ಲಕ್ಷಣಗಳಾಗಿದ್ದು, ಇವು ಕಾಣಿಸಿಕೊಂಡಲೇ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ಪರೀಕ್ಷಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಹರೀಶ್‌, ಕೌದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಂಗಮಣಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವೀಣಾ, ಪ್ರಯೋಗಶಾಲಾ ತಂತ್ರಜ್ಞ ಅಬ್ದುಲ್ ಮುಜೀದ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.