ADVERTISEMENT

ತೆಂಗು ಬೆಳೆಗಾರರಿಗೆ ಪರಿಹಾರ ನೀಡಿ

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಮೇ 2017, 6:08 IST
Last Updated 1 ಮೇ 2017, 6:08 IST
ಜಮೀನಿನಲ್ಲಿ ಒಣಗಿರುವ ತೆಂಗಿನಮರವನ್ನು ವಾಟಾಳ್‌ ನಾಗರಾಜ್‌ ಅಪ್ಪಿಕೊಂಡಿರುವುದು.
ಜಮೀನಿನಲ್ಲಿ ಒಣಗಿರುವ ತೆಂಗಿನಮರವನ್ನು ವಾಟಾಳ್‌ ನಾಗರಾಜ್‌ ಅಪ್ಪಿಕೊಂಡಿರುವುದು.   

ಚಾಮರಾಜನಗರ: ‘ಜಿಲ್ಲೆಯಾದ್ಯಂತ ಬರಗಾಲ ಆವರಿಸಿದೆ. ಜಮೀನಿನಲ್ಲಿ ತೆಂಗಿನ ಮರಗಳು ಒಣಗಿಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ, ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ತಾಲ್ಲೂಕಿನ ಅಮಚವಾಡಿ, ಹೊನ್ನ ಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನಿಗೆ ಭಾನುವಾರ ಭೇಟಿ ನೀಡಿದ ಅವರು, ಒಣಗಿ ನಿಂತಿರುವ ತೆಂಗಿನ ಮರಗಳನ್ನು ವೀಕ್ಷಿಸಿದರು.

ಬಳಿಕ, ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ‘ಜಿಲ್ಲೆಯಲ್ಲಿ ಹಿಂದೆಂದೂ ಕಂಡಿರದ ಭೀಕರ ಬರ ಗಾಲ ಆವರಿಸಿದೆ. ಕೆರೆ, ಕಟ್ಟೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಜನ, ಜಾನು ವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಹಲವು ಗ್ರಾಮಗಳಲ್ಲಿ ತೆಂಗಿನ ಮರಗಳು ಸಂಪೂರ್ಣ ನಾಶ ವಾಗಿವೆ. ಇದರಿಂದ ತೆಂಗು ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲ ವಾಗಿದೆ’ ಎಂದು ಟೀಕಿಸಿದರು.

‘ಸರ್ಕಾರ ರೈತರಿಗೆ ಬೆಳೆ ನಷ್ಟ ಹಾಗೂ ಸಹಾಯಧನ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕೂಡಲೇ, ಸರ್ಕಾರ ಈ ಬಗ್ಗೆ ಆಲೋಚಿಸಿ ಕ್ರಮ ವಹಿಸಬೇಕು’ ಎಂದು ವಾಟಾಳ್‌ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಳಪತಿ ವೀರತಪ್ಪ, ನಾಗರಾಜಮೂರ್ತಿ, ನಾಗೇಶ್, ವರದರಾಜು, ಬಸವಣ್ಣ, ಮಹೇಶ, ಸಿದ್ದರಾಜು, ವರದನಾಯಕ, ಶಿವಲಿಂಗಮೂರ್ತಿ, ರಾಜೇಶ್, ವಿಜಯ್, ರಾಜೇಂದ್ರ, ಲೋಕೇಶ್‌ ಹಾಗೂ ಮಹದೇವ ಸ್ವಾಮಿ ಇತರರು ಹಾಜರಿದ್ದರು.

ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ಪ್ರತಿಭಟನೆ
‘ತಾಲ್ಲೂಕಿನ ಕೊತ್ತಲವಾಡಿಕೆರೆ, ಎಣ್ಣೆಹೊಳೆ, ಅರಕಲವಾಡಿ ಕೆರೆ, ಬಂಡಿಗೆರೆ, ದೊಡ್ಡಕೆರೆ, ಕೋಡಿಮೋಳೆ ಕೆರೆ, ದೊಡ್ಡರಾಯಪೇಟೆ ಕೆರೆ ಹಾಗೂ ಚಿಕ್ಕಹೊಳೆ ಸೇರಿದಂತೆ ತಾಲ್ಲೂಕಿನ ಎಲ್ಲ ಪ್ರಮುಖ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿ ಮೇ 3ರಂದು ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್‌ ಹೇಳಿದರು.

ರೈತರಿಗೆ ಬೆಳೆ ಪರಿಹಾರ ಸಮ ರ್ಪಕವಾಗಿ ನೀಡಬೇಕು. ಜಿಲ್ಲೆಯಾದ್ಯಂತ ತೆರೆದಿರುವ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ನೀರು ಒದಗಿಸಬೇಕು. ಮಳೆಯಿಲ್ಲದೇ ಸಂಪೂರ್ಣ ನಾಶವಾಗಿರುವ ತೆಂಗಿನ ಮರಗಳಿಗೆ ಸೂಕ್ತ ಪರಿಹಾರ ನೀಡ ಬೇಕು’ ಎಂದು ಆಗ್ರಹಿಸಲಾಗುವುದು ಎಂದರು.

‘ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಚಾಮರಾಜೇಶ್ವರ ಸ್ವಾಮಿಯ ದೊಡ್ಡ ರಥ ನಿರ್ಮಾಣ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

*
ಬರಗಾಲದಿಂದ ಜಿಲ್ಲೆಯಲ್ಲಿ ಹಲವು ಸಮಸ್ಯೆ ಉದ್ಭವಿಸಿದೆ. ಆದರೆ, ಅಧಿಕಾರಿಗಳು ರೈತರ ಜಮೀನು ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿ ಸದಿರುವುದು ದುರದೃಷ್ಟಕರ.
-ವಾಟಾಳ್‌ ನಾಗರಾಜ್‌,
ಅಧ್ಯಕ್ಷ, ಕನ್ನಡ ಚಳವಳಿ ವಾಟಾಳ್‌ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.