ADVERTISEMENT

ದಡಾರ – ರುಬೆಲ್ಲಾ ಅಭಿಯಾನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:47 IST
Last Updated 3 ಮಾರ್ಚ್ 2017, 6:47 IST

ಚಾಮರಾಜನಗರ: ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಡಿ ಶೇ 86ರಷ್ಟು ಸಾಧನೆಯಾಗಿದ್ದು, ಮಾರ್ಚ್‌ 8ರವರೆಗೂ ಅಭಿಯಾನ ವಿಸ್ತರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಬಿ. ರಾಮು ಮಾತ ನಾಡಿ, ‘ಲಸಿಕೆ ನೀಡುವ ಸಂಬಂಧ ಪ್ರಾರಂಭದ ದಿನಗಳಲ್ಲಿ ಗೊಂದಲ ತಲೆ ದೋರಿತು. ವದಂತಿಯಿಂದಾಗಿ ಜಿಲ್ಲೆ ಯಲ್ಲಿ ಗರಿಷ್ಠ ಸಾಧನೆಗೆ ತೊಡಕಾಯಿತು. ಈ ನಡುವೆಯೂ ಉತ್ತಮ ಸಾಧನೆ ಯಾಗಿದೆ’ ಎಂದರು.

ಮುಂದಿನ ದಿನಗಳಲ್ಲಿ ಉಳಿದ ಮಕ್ಕಳಿಗೆ ಲಸಿಕೆ ನೀಡಿ ಶೇ 100ರಷ್ಟು ಗುರಿ ಸಾಧಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ನಾಗರಿಕರಲ್ಲಿ ಲಸಿಕೆ ಬಗ್ಗೆ ಇನ್ನೂ ಆತಂಕವಿದೆ. ಇದನ್ನು ದೂರ ಮಾಡಲು ಶಾಲಾಮಟ್ಟದಲ್ಲಿ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಆರ್‌ಸಿಎಚ್ ಡಾ.ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ,  ಮಾರ್ಚ್‌ 8ರವರೆಗೂ ಅಭಿಯಾನ ವಿಸ್ತರಿಸ ಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಉಳಿದ ಮಕ್ಕಳಿಗೆ ಲಸಿಕೆ ನೀಡಲಾಗು ವುದು ಎಂದು ತಿಳಿಸಿದರು.

ಮೈಸೂರಿನ ಎನ್‌ಪಿಎಸ್‌ಪಿಯ ಡಾ.ಸುಧೀರ್ ನಾಯಕ್ ಅಭಿಯಾನ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡ ಚಟುವಟಿಕೆ ಹಾಗೂ ಪ್ರಗತಿ ಬಗ್ಗೆ ಸಭೆಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಕೆ.ಎಚ್‌. ಪ್ರಸಾದ್, ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂ ಲನಾ ಅಧಿಕಾರಿ ಡಾ.ರಾಜು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹದೇವ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಯೂನಿಸೆಫ್ ಪ್ರತಿನಿಧಿ ರಚಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.