ADVERTISEMENT

ನಗದು ರಹಿತ ವ್ಯಾಪಾರ ಯೋಜನೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:27 IST
Last Updated 16 ಏಪ್ರಿಲ್ 2017, 6:27 IST

ಚಾಮರಾಜನಗರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯ ಮಾಹಿತಿ ತಂತ್ರಜ್ಞಾನ ಇಲಾಖೆ ನೀತಿ ಆಯೋಗದಿಂದ ನಗದು ರಹಿತ ವ್ಯಾಪಾರ ಯೋಜನೆ ಜಾಗೃತಿ ಕುರಿತ ಕಾರ್ಯಾಗಾರ ನಡೆಯಿತು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನಗದು ರಹಿತ ವ್ಯಾಪಾರ ವಹಿ ವಾಟಿನ ಪ್ರಯೋಜನದ ಬಗ್ಗೆ ಉಪನ್ಯಾಸ ನೀಡಿದರು.

ಲೀಡ್‌ಬ್ಯಾಂಕ್‌ನ ವ್ಯವಸ್ಥಾಪಕ ಸಿದ್ದರಾಜು ಮಾತನಾಡಿ, ಬ್ಯಾಂಕ್‌ಗಳು ಕಳೆದ 10ವರ್ಷದಿಂದ ಕಾಗದ ರಹಿತ ವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಬ್ಯಾಂಕ್‌ ಗಳು ತಂತ್ರಜ್ಞಾನ ಬಳಕೆ ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ್‌ ಧನ್‌ ಖಾತೆ ತೆರೆಯಲಾಗಿದೆ. ಈ ಪೈಕಿ 60ಸಾವಿರ ಖಾತೆದಾರರು ವಹಿ ವಾಟು ನಡೆಸುತ್ತಿಲ್ಲ ಎಂದ ಅವರು, ಪ್ರಧಾನ ಮಂತ್ರಿ ವಿಮಾ ಸುರಕ್ಷಾ ಯೋಜನೆಯ ಪ್ರಯೋಜನ ಪಡೆಯಲು ಖಾತೆದಾರ ರಿಗೂ ಅವಕಾಶವಿದೆ ಎಂದರು.

ADVERTISEMENT

ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ನಗದು ರಹಿತ ವ್ಯವಸ್ಥೆಯಿಂದ ಸಮಯ ಉಳಿತಾಯ ವಾಗಲಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ರೈತರ ಖಾತೆಗಳಿಗೆ ನೇರವಾಗಿ ಬೆಳೆ ವಿಮೆ ಹಾಗೂ ಪರಿಹಾರದ ಹಣ ಸಂದಾಯವಾಗಲಿದೆ. ರೈತರು ಬ್ಯಾಂಕ್‌ ಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು.

ಈ ವೇಳೆ ಪ್ರಧಾನ ಮಂತ್ರಿ ಅವರು ನಾಗಪುರದಲ್ಲಿ ಅನಕ್ಷರಸ್ಥರು ಬಳಸ ಬಹುದಾದ ಭೀಮ್ ಆಧಾರ್ ಆ್ಯಪ್ ಸೇವೆ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆಧಾರ್ ಜಿಲ್ಲಾ ಸಮಾಲೋಚಕ ರಾಮ್‌ಪ್ರಸಾದ್, ತಹಶೀಲ್ದಾರ್ ಕೆ. ಪುರಂದರ, ಎನ್ಐಸಿ ಅಧಿಕಾರಿಗಳಾದ ಯತಿರಾಜು, ಚಲುವರಾಜು ಹಾಜರಿದ್ದರು.

ಕಾರ್ಯಾಗಾರಕ್ಕೆ ಭೇಟಿ ನೀಡಿದ ಸಂಸದ ಆರ್.ಧ್ರುವನಾರಾಯಣ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.