ADVERTISEMENT

ನಿಷೇಧದ ನಡುವೆ ಮುಂದುವರಿದ ಮರಳುಗಾರಿಕೆ

ಕಂದಾಯ ಇಲಾಖೆ ಅಧಿಕಾರಿಗಳ ದಾಳಿ; ಮರಳು ಎತ್ತುತ್ತಿದ್ದ ಕಾರ್ಮಿಕರು ಪರಾರಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 8:23 IST
Last Updated 27 ನವೆಂಬರ್ 2014, 8:23 IST
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಬಳಿ ಕಾವೇರಿ ನದಿಯಲ್ಲಿ ಮರಳು ಸಂಗ್ರಹದಲ್ಲಿ ತೊಡಗಿರುವ ಕೊಪ್ಪರಿಕೆ ಕೂಲಿಕಾರ್ಮಿಕರು (
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಬಳಿ ಕಾವೇರಿ ನದಿಯಲ್ಲಿ ಮರಳು ಸಂಗ್ರಹದಲ್ಲಿ ತೊಡಗಿರುವ ಕೊಪ್ಪರಿಕೆ ಕೂಲಿಕಾರ್ಮಿಕರು (   

ಕೊಳ್ಳೇಗಾಲ: ನದಿಯಲ್ಲಿ ಮರಳು ಸಂಗ್ರಹ ನಿಷೇಧದ ನಡುವೆಯೂ ಅಕ್ರಮ ಮರಳು ಸಂಗ್ರಹಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರ್‌ ಸಿ. ಮಹಾದೇವಯ್ಯ ನೇತೃತ್ವದಲ್ಲಿ ಬುಧವಾರ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ವ್ಯಾಪಕ ದಾಳಿ ನಡೆಸಲಾಯಿತು.

ಮಂಗಳವಾರ ಪಟ್ಟಣದಲ್ಲಿ ನಡೆದ ಮರಳು ಸಾಗಣೆದಾರರ ಪ್ರತಿಭಟನೆ ಸಂದರ್ಭದಲ್ಲಿ ಮುಖಂಡರು ಕೂಲಿಕಾರ್ಮಿಕರಿಗೆ ತಪ್ಪುಸಂದೇಶ ನೀಡಿದ ಹಿನ್ನೆಲೆಯಲ್ಲಿ ಅಕ್ರಮ ಮರಳು ಸಂಗ್ರಹ ಚುರುಕುಗೊಂಡಿತ್ತು.

ಮರಳು ವಶ: ತಾಲ್ಲೂಕಿನ ಸರಗೂರು ಬಳಿ ಮರಳು ಅಕ್ರಮ ಸಾಗಣೆಯಲ್ಲಿ ತೊಡಗಿದ್ದ 2 ಎತ್ತಿನಗಾಡಿಗಳನ್ನು ಹಿಡಿದು ಅವರಿಗೆ ಎಚ್ಚರಿಕೆ ನೀಡಲಾಯಿತು. ನಂತರ ನದಿಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಕಂದಾಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ಕೊಪ್ಪರಿಕೆ ವಶ: ದಾಸನಪುರ ಕಾವೇರಿನದಿ ಬಳಿ ಒಂದು ಕೊಪ್ಪರಿಕೆ ವಶಪಡಿಸಿಕೊಳ್ಳಲಾಗಿದೆ 20ಕ್ಕೂ ಹೆಚ್ಚು ವ್ಯಕ್ತಿಗಳು ಕೊಪ್ಪರಿಕೆ ಸಮೇತ ತಲೆತಪ್ಪಿಸಿಕೊಂಡಿದ್ದಾರೆ. ಅಧಿಕಾರಿಗಳು ಮೋಟಾರ್‌ ಬೋಟ್‌ನಲ್ಲಿ ಅಕ್ರಮ ಮರಳು ಸಂಗ್ರಹ ದೊಡಗಿದವರತ್ತ ಸಾಗಿದಾಗ ಅವರು ಕೊಪ್ಪರಿಕೆಗಳನ್ನು ನೀರಿನಲ್ಲಿ ಮುಳುಗಿಸಿ ತಪ್ಪಿಸಿಕೊಂಡಿದ್ದಾರೆ.

ಅಳಲು: ನಮ್ಮ ಕುಟುಂಬದವರು ನದಿಯಲ್ಲಿ ಮರಳು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದೆವು. ಈಗ ಏಕಾಏಕಿ ಮರಳು ಸಾಗಣೆ ನಿಂತರೆ ನಾವು ಬೀದಿಪಾಲಾಗುತ್ತೇವೆ. ಆದ್ದರಿಂದ ಮರಳು ಸಂಗ್ರಹಕ್ಕೆ ಅನುಮತಿ ನೀಡಬೇಕು ಎಂದು ದಾಸನಪುರದ ಕೆಲ ಮಹಿಳೆಯರು ಕಾವೇರಿ ನದಿ ದಡದಲ್ಲಿ ಜಮಾವಣೆಗೊಂಡ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.

ಇಲಾಖೆಯೊಂದಿಗೆ ಸಹಕರಿಸಲು ಮನವಿ: ಸುಪ್ರೀಂ ಕೋರ್ಟ್‌ ನದಿಯಲ್ಲಿ ಮರಳು ಸಂಗ್ರಹವನ್ನು ಕಳವು ಪ್ರಕರಣದಂತೆ ಪರಿಗಣಿಸಲು ಸೂಚಿಸಿದೆ. ಮರಳು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ನದಿ ಪಾತ್ರದ ಮರಳು ಕೂಲಿ ಕಾರ್ಮಿಕರು ಈ ಬಗ್ಗೆ ಅರಿತುಕೊಂಡು ಕಂದಾಯ ಇಲಾಖೆ ಜೊತೆ ಸಹಕರಿಸಬೇಕು. ಅಕ್ರಮ ಮರಳು ಸಾಗಣೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದರಿಂದ ಅಕ್ರಮ ಮರಳು ಸಾಗಣೆ ಮಾಡಲು ಯಾರೂ ಮುಂದಾಗಬಾರದು ಎಂದು ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಹಾಗೂ ತಹಶೀಲ್ದಾರ್‌ ಸಿ. ಮಹಾದೇವಯ್ಯ ಅವರು ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆ ಎಇಇ ಉಜನಿ ಸಿದ್ದಪ್ಪ, ಪಟ್ಟಣ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸಂತೋಷ್‌, ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಆನಂದ್‌, ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.