ADVERTISEMENT

ನೀಟ್‌ ಪರೀಕ್ಷೆ ರದ್ಧತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:13 IST
Last Updated 6 ಸೆಪ್ಟೆಂಬರ್ 2017, 6:13 IST

ಚಾಮರಾಜನಗರ: ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾಳ ಸಾವಿಗೆ ಕಾರಣವಾದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ ನಡೆಯಿತು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಬಿವಿಎಸ್‌ನ ಪದಾಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನಕ್ಕೆ ತೆರಳಿ ಪರೀಕ್ಷೆ ರದ್ದುಗೊಳಿಸಿ, ಅನಿತಾಳ ಸಾವಿಗೆ ನ್ಯಾಯ ದೊರಕಿಸಿ ಎಂಬಿತ್ಯಾದಿ ಘೋಷಣೆ ಕೂಗಿದರು.

ರಾಷ್ಟ್ರದಾದ್ಯಂತ ಒಂದೇ ದೇಶ ಒಂದೇ ತೆರಿಗೆ ಮಾದರಿಯಲ್ಲಿ ಒಂದೇ ದೇಶ ಒಂದೇ ಶಿಕ್ಷಣದಂತಹ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಸ್ಥಳೀಯ ಪ್ರಾದೇಶಿಕ ಭಾಷೆಗೆ ಒತ್ತು ಕೊಡುವುದರೊಂದಿಗೆ ದೇಶದಾದ್ಯಂತ ಒಂದೇ ಪಠ್ಯಕ್ರಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಾದೇಶಿಕ ಭಾಷೆಯೊಂದಿಗೆ ಇಂಗ್ಲಿಷ್‌ ಭಾಷೆಯನ್ನು ಉತ್ತಮವಾಗಿ ಕಲಿಸುವಂತಹ ವಾತಾವರಣ ನಿರ್ಮಿಸಬೇಕು. ಪರಿಣಿತ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ನೇಮಿಸಬೇಕು. ರಾಜ್ಯ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಹಾಗೂ ಕೇಂದ್ರ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುವಂತಹ ಪ್ರವೇಶ ಪರೀಕ್ಷೆಗಳಾದ ನೀಟ್, ಜೆಇಇ, ಕ್ಯಾಟ್, ಗೇಟ್ ಮುಂತಾದ ಅವೈಜ್ಞಾನಿಕ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಪದ್ಧತಿಯಂತೆ ಆಯಾ ರಾಜ್ಯಗಳೇ ಸಿಇಟಿ ಪರೀಕ್ಷೆ ವಿಧಾನದ ಮೂಲಕ ಸೀಟು ಹಂಚಿಕೆ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಸಾಂವಿಧಾನಿಕ ಹಕ್ಕಾದ ಶಿಕ್ಷಣ ದೇಶದಾದ್ಯಂತ ವ್ಯಾಪಾರವಾಗುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರುದ್ಧವಾಗಿದ್ದು, ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ತಕ್ಷಣವೇ ಜಾರಿಗೆ ತರಬೇಕು ಇಲ್ಲವಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಜನಾಭಿಪ್ರಾಯಗಳನ್ನು ರೂಪಿಸಿ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿವಿಎಸ್‌ನ ಜಿಲ್ಲಾ ಸಂಯೋಜಕ ಪರ್ವತ್‌ರಾಜ್‌, ಜಿಲ್ಲಾ ಘಟದ ಅಧ್ಯಕ್ಷ ಮಹೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ, ಪದಾಧಿಕಾರಿಗಳಾದ ಮಣಿ, ವೆಂಕಟೇಶ್‌, ಕೃಷ್ಣಮೂರ್ತಿ, ಕಾರ್ತಿಕ್‌ ಸೇರಿದಂತೆ ಜೆ.ಎಸ್.ಎಸ್‌ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕರ ಹಾಗೂ ಬಾಲಕಿಯರ ಕಾಲೇಜು, ತೆರಕಣಾಂಬಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.