ADVERTISEMENT

ನೀತಿ ಸಂಹಿತೆ ಉಲ್ಲಂಘನೆ

ಬಿಜೆಪಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:12 IST
Last Updated 24 ಮಾರ್ಚ್ 2017, 8:12 IST

ಚಾಮರಾಜನಗರ: ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು  100ರಿಂದ 150 ಕಾರ್ಯಕರ್ತರು ಮತಯಾಚಿಸಲು ಅನುಮತಿ ಪಡೆಯಲಾಗಿತ್ತು.

ಗುಂಡ್ಲು ಪೇಟೆಯ ಜಾಕೀರ್ ಹುಸೇನ್ ಬಡಾವಣೆಯಿಂದ ಮಹದೇವಪ್ರಸಾದ್ ನಗರದವರೆಗೆ ತೆರಳಲು ಚಾಮರಾಜ ನಗರ ತಾಲ್ಲೂಕು ಯುವ ಮೋರ್ಚಾ ಮತ್ತು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖಮೂರ್ತಿ ಅನುಮತಿ ಪಡೆದಿದ್ದರು.

ಆದರೆ, ಅನುಮತಿಗಿಂತ ಹೆಚ್ಚು ಅಂದರೆ ಸುಮಾರು 600ರಿಂದ 700 ಮಂದಿ ಕಾರ್ಯಕರ್ತರು ಭಾಗವಹಿಸಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳಿ ಮತ ಯಾಚಿಸಲು ಅನುಮತಿ ನೀಡಲಾಗಿತ್ತು. ಆದರೆ, ವಾಹನ ಬಳಸಿ, ಅದಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಮತ ಯಾಚಿಸಿರುವುದು ಕಂಡು ಬಂದಿದೆ. ಇದು ನೀತಿಸಂಹಿತೆ ಉಲ್ಲಂಘನೆ ಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನಿ ಅತುಲ್ ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಗುರುವಾರ ಸಹ ಪ್ರಕರಣ ದಾಖಲಾಗಿದೆ. ಅಬಕಾರಿ ಅಧಿಕಾರಿಗಳು ಜಿಲ್ಲೆಯ ಹಲವೆಡೆ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನ ಪುರ ಗ್ರಾಮದ ಮಹದೇವು ಅವರಿಂದ 0.630 ಮಿ.ಲೀಟರ್, ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲಿಯೂರು ಗ್ರಾಮದ ಬಸವಶೆಟ್ಟಿ ಅವರಿಂದ 0.360 ಮಿ. ಲೀಟರ್, ಹರವೆ ಗ್ರಾಮದ ಸಿದ್ದನಾಯ್ಕ ಮತ್ತು ಮಹದೇವಪ್ರಸಾದ್ ಅವರಿಂದ 0.090 ಮಿ. ಲೀಟರ್, ಉಡಿಗಾಲ ಗ್ರಾಮದ ಮಲ್ಲೇಶ್ ಅವರಿಂದ 0.630 ಮಿ. ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.