ADVERTISEMENT

ನೆರವಿನ ನಿರೀಕ್ಷೆಯಲ್ಲಿ ಹಾಡು ಹಕ್ಕಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:40 IST
Last Updated 9 ನವೆಂಬರ್ 2017, 5:40 IST
ಅನಾರೋಗ್ಯದಿಂದ ಬಳಲುತ್ತಿರುವ ಜನಪದ ಗಾಯಕಿ ಚಂದ್ರಮ್ಮ
ಅನಾರೋಗ್ಯದಿಂದ ಬಳಲುತ್ತಿರುವ ಜನಪದ ಗಾಯಕಿ ಚಂದ್ರಮ್ಮ   

ಯಳಂದೂರು: ಜಾನಪದ ಹಾಡು ಹಕ್ಕಿ, ಸೊಪ್ಪಿನ ಚಂದ್ರಮ್ಮ ಎಂದೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಚಂದ್ರಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು, ಸೂಕ್ತ ಆಶ್ರಯವಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇದ್ದರೂ ವೇದಿಕೆ ಏರಬೇಕು. ಅಲ್ಲಿ ಒಂದಾದರೂ ಜಾನಪದ ಗೀತೆ ಹಾಡಬೇಕು ಎಂದು ಬಯಸಿ ಮಾಂಬಳ್ಳಿ ಸಮೀಪದ ಕುನಗಳ್ಳಿ ಗ್ರಾಮದ ಚಂದ್ರಮ್ಮ ಅವರಿಗೆ ಆಹ್ವಾನ ನೀಡುತ್ತಿದ್ದವರೇ ಹೆಚ್ಚು.

ಆದರೆ, ದೇಸಿ ಪದಗಳ ಒಡತಿ ಚಂದ್ರಮ್ಮ ಈಗ ಅಸಹಾಯಕರಾಗಿದ್ದಾರೆ. ಶಿಥಿಲಗೊಂಡಿರುವ ಮನೆ, ಮುರಿದ ಬಾಗಿಲು, ಅಸ್ತವ್ಯಸ್ತವಾಗಿ ಬಿದ್ದಿರುವ ವಸ್ತುಗಳ ನಡುವೆ ಮಂಚದ ಮೇಲೆ ಮಲಗಿ, ಸಹಾಯ ಹಸ್ತಕ್ಕಾಗಿ ಕಾಯುತ್ತಿದ್ದಾರೆ.

ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ ಅವರ ಜಾನಪದ ಗೀತೆಗಳು, ಸೋಬಾನೆಪದ, ನಾಟಿಪದ, ರಾಗಿ ಕಲ್ಲು ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಅವರಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿದಂತೆ ರಾಜಕೀಯ ಮುಖಂಡರು, ಮಠಾಧೀಶರು ಸೇರಿದಂಗೆ ವಿವಿಧ ಸಂಘ ಸಂಸ್ಥೆಗಳಿಂದ ಚಂದ್ರಮ್ಮ ಸನ್ಮಾನಿತರಾಗಿದ್ದಾರೆ.

ADVERTISEMENT

‘ಇನ್ನೊಬ್ಬರ ಹಂಗಿನಲ್ಲಿ ಬದುಕದೆ, ಸೊಪ್ಪನ್ನು ಮಾರುತ್ತಾ ಸ್ವಾಭಿಮಾನಿಯಾಗಿ ಜೀವನ ನಡೆಸುತ್ತಿದ್ದ ಈಕೆ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದು, ನೆರವಿನ ದಾರಿ ನೋಡುತ್ತಿದ್ದಾರೆ. ಜೀವನಕ್ಕೆ ಮಾಸಿಕ ಪಿಂಚಣಿ ಬಿಟ್ಟರೆ ಇನ್ನಾವುದೇ ಆದಾಯವಿಲ್ಲ.

ಚಿಕಿತ್ಸೆಯ ಹೆಚ್ಚು ವೆಚ್ಚವನ್ನು ಭರಿಸಲು ಆದಾಯವಿಲ್ಲದೆ, ಮಲಗಿದಲ್ಲೇ ಇರುವ ಸ್ಥಿತಿ ಚಂದ್ರಮ್ಮ ಅವರದಾಗಿದ್ದು ಸರ್ಕಾರ ಅವರ ನೆರವಿಗೆ ಬರಬೆಕು’ ಎಂದು ಗ್ರಾಮದ ಗೋವಿಂದರಾಜು ಹಾಗೂ ನಾಗರಾಜ್ ಮನವಿ ಮಾಡಿದ್ದಾರೆ. ‘70 ವರ್ಷದ ಇಳಿವಯಸ್ಸಿನಲ್ಲೂ ಹಾಡುವ ಹಂಬಲ ಇದೆ. ಜಿಲ್ಲಾಡಳಿತ ನನಗೆ ನೆರವಾಗಲಿ’ ಎಂದು ಕಂಬನಿ ಮಿಡಿಯುತ್ತಾರೆ ಚಂದ್ರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.