ADVERTISEMENT

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 1 ಕೋಟಿ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಒತ್ತು: ಸಚಿವ ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 8:53 IST
Last Updated 2 ಮಾರ್ಚ್ 2017, 8:53 IST
ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸುಟ್ಟುಹೋಗಿರುವ ಬ್ರಹ್ಮರಥ ವೀಕ್ಷಿಸಿದರು. ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದರು
ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸುಟ್ಟುಹೋಗಿರುವ ಬ್ರಹ್ಮರಥ ವೀಕ್ಷಿಸಿದರು. ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದರು   

ಚಾಮರಾಜನಗರ:  ‘ರಾಜ್ಯದಲ್ಲಿ ಬರಗಾಲ ತಲೆದೋರಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ₹ 1 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಹೊಸ ಕೊಳವೆಬಾವಿ ಕೊರೆಯಿಸಲು ಹಾಗೂ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಈ ಅನುದಾನ ಬಳಸಿಕೊಳ್ಳಲು ಸೂಚಿಸ ಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

‘ಜಿಲ್ಲೆಯಲ್ಲಿ 3 ಗೋ ಶಾಲೆ ಹಾಗೂ 9 ಮೇವು ನಿಧಿ ಬ್ಯಾಂಕ್‌ ತೆರೆಯಲಾಗಿದೆ. ಆ ಮೂಲಕ ರೈತರಿಗೆ ಅನುಕೂಲ ಕಲ್ಪಿಸ ಲಾಗಿದೆ. ಜಿಲ್ಲೆಯಿಂದ ಅಕ್ರಮವಾಗಿ ಮೇವು ಸಾಗಾಣಿಕೆ ತಡೆಯುವ ಬಗ್ಗೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ’ ಎಂದು ಬುಧವಾರ ಅವರು ಸುದ್ದಿಗೋಷ್ಠಿ ಯಲ್ಲಿ ಹೇಳಿದರು.

ಪ್ರತಿಪಕ್ಷಗಳು ಡೈರಿ ಹೆಸರಿನಡಿ ಸುಳ್ಳು ಆರೋಪ ಮಾಡುತ್ತಿವೆ. ರಾಜ್ಯ ಸರ್ಕಾ ರದ ಜನಪರ ಕಾರ್ಯಕ್ರಮ ಸಹಿಸದೆ ಷಡ್ಯಂತ್ರ ನಡೆಸುತ್ತಿವೆ ಎಂದು ದೂರಿದರು.

ಪ್ರತಿಪಕ್ಷಗಳು ತಮ್ಮ ಒಳಜಗಳ ಮುಚ್ಚಿಕೊಳ್ಳಲು ಈ ರೀತಿ ಸುಳ್ಳು ಆರೋಪ ಮಾಡುತ್ತಿವೆ. ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಡೈರಿ ಇವರ ಬಳಿ ಹೇಗೆ ಬಂತು? ಅದನ್ನು ಮೊದಲು ತಿಳಿಸಬೇಕು. ಐಟಿ ಅಧಿಕಾರಿ ಗಳೇ ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

‘ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಜೈಲಿಗೆ ಹೋದವರು ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ತಮ್ಮ ತಟ್ಟೆಯಲ್ಲಿಯೇ ಹೆಗ್ಗಣ ಸತ್ತಿದೆ. ಮೊದಲು ಅದನ್ನು ತೆಗೆದು ಹೊರಹಾಕಿ. ಅದು ಬಿಟ್ಟು ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ಸೊಳ್ಳೆ ಹುಡುಕುವ ಮೂರ್ಖತನ ಪ್ರದರ್ಶಿಸಬೇಡಿ’ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್‌. ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಕೆ.ಪಿ.ಸದಾಶಿವಮೂರ್ತಿ, ಎಚ್.ವಿ. ಚಂದ್ರು, ಸುಹೇಲ್‌ ಆಲಿಖಾನ್‌, ಬಿ. ರಾಮು, ಡಾ.ಕೆ.ಹರೀಶ್‌ ಕುಮಾರ್‌ ಹಾಗೂ ನಳಿನಿ ಅತುಲ್‌ ಸೇರಿದಂತೆ ಇತರರು ಹಾಜರಿದ್ದರು.

ಹೊಸ ರಥ ಸದ್ಯಕ್ಕಿಲ್ಲ: ಖಾದರ್
ಚಾಮರಾಜನಗರ:
ಸಚಿವ ಖಾದರ್‌ ಅವರು ಚಾಮ ರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸುಟ್ಟುಹೋಗಿರುವ ಬ್ರಹ್ಮ ರಥ ಮತ್ತು ಜೀರ್ಣೋದ್ಧಾರ ಕಾಮಗಾರಿ ಪರಿಶೀಲಿಸಿದರು.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ‘ದೇಗುಲದ ಜೀರ್ಣೋದ್ಧಾರಕ್ಕೆ ಬಿಡುಗಡೆ ಯಾಗಿರುವ ಅನುದಾನದಡಿ ಹೊಸ ರಥ ನಿರ್ಮಿಸಲು ಸಾಧ್ಯ ವಿಲ್ಲ. ಹೊಸ ರಥ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಲಾಗಿದೆ. ಬಜೆಟ್‌ ನಂತರ ಅನುದಾನ ನೀಡುವು ದಾಗಿ ಭರವಸೆ ನೀಡಿದ್ದಾರೆ’ ಎಂದರು.

ಈಗ ಅನುದಾನ ನೀಡಿದರೂ ಹೊಸ ರಥ ನಿರ್ಮಿಸಲು ಸಾಧ್ಯ ವಾಗುವುದಿಲ್ಲ. ಈಗಿರುವ ರಥವನ್ನೇ ದುರಸ್ತಿಪಡಿಸಿ ಈ ವರ್ಷ ರಥೋತ್ಸವ ನಡೆಸಲಾಗು ವುದು. ಮುಂದಿನ ವರ್ಷ ಹೊಸ ರಥ ನಿರ್ಮಿಸಲಾಗುತ್ತದೆ ಎಂದರು.

*
ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 297 ಹಳ್ಳಿಗಳಿಗೆ ನದಿಮೂಲದಿಂದ ನೀರು ತುಂಬಿಸಲು ಯೋಜನೆಗೆ ಮಾರ್ಚ್‌ 10ರಂದು ಚಾಲನೆ ನೀಡಲಾಗುವುದು.
-ಯು.ಟಿ. ಖಾದರ್,
ಜಿಲ್ಲಾ ಉಸ್ತುವಾರಿ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.