ADVERTISEMENT

ಪ್ರವೇಶಾತಿ: ನಿಯಮ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 9:45 IST
Last Updated 6 ಮೇ 2016, 9:45 IST

ಚಾಮರಾಜನಗರ: ಜಿಲ್ಲೆಯ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಸಂಬಂಧ ಇಲಾಖೆ ನೀಡಿರುವ ಸೂಚನೆ, ನಿರ್ದೇಶನ ಪಾಲಿಸ ಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲೆಯಲ್ಲಿ ಲಭ್ಯವಿರುವ ಸೀಟು ಗಳನ್ನು ತರಗತಿವಾರು ಪ್ರಕಟಣಾ ಫಲಕದಲ್ಲಿ ಪ್ರಕಟಿಸಬೇಕು. ಬೋಧನಾ ಮಾಧ್ಯಮ ಸ್ಪಷ್ಟಪಡಿಸಬೇಕು. ಪ್ರವೇಶ ಸಂಬಂಧ ವೇಳಾಪಟ್ಟಿ ಪ್ರಕಟಿಸಿ ಮೇ ಕೊನೆ ವಾರ ಪ್ರವೇಶಾತಿ ನೀಡಬೇಕು.

ಪ್ರಚಲಿತ ನಿಯಮಗಳ ಅನ್ವಯ ಮೀಸಲಾತಿ ಪಾಲಿಸಬೇಕು. ಪ್ರಥಮ ಪ್ರವೇಶದ ತರಗತಿ ಹೊರತುಪಡಿಸಿ ಇತರೆ ತರಗತಿಗಳಿಗೆ ಪ್ರವೇಶ ನೀಡುವಾಗ ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು.

ಶಾಲಾ ಪ್ರವೇಶಕ್ಕೆ ಪೋಷಕರಿಗೆ ಪರೀಕ್ಷೆ ಅಥವಾ ಸಂದರ್ಶನ ನಡೆಸು ವುದು ಕಾನೂನುಬಾಹಿರ. ಮೊದಲ ಬಾರಿಗೆ ನಿಯಮ ಉಲ್ಲಂಘನೆಗೆ ₹ 25 ಸಾವಿರ ದಂಡ ವಿಧಿಸಲಾಗುತ್ತದೆ.

ಅನುದಾನಿತ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಬೋಧನಾ ಶುಲ್ಕ, ಬೋಧನೇತರ ಶುಲ್ಕ, ಅಭಿವೃದ್ಧಿ ಶುಲ್ಕ ಇರುವುದಿಲ್ಲ. 6ರಿಂದ 8ನೇ ತರಗತಿ ವರೆಗೆ ಬೋಧನಾ ಶುಲ್ಕ ಇರುವುದಿಲ್ಲ.

ಬೋಧನೇತರ ಶುಲ್ಕ (ಆರ್‌ಟಿಇ ಕಾಯ್ದೆ ಸೆಕ್ಷನ್ 2ಬಿ ಅನ್ವಯ) ₹ 38, ವಿಶೇಷ ಅಭಿವೃದ್ಧಿ ಶುಲ್ಕ ₹ 500, 9 ಮತ್ತು 10ನೇ ತರಗತಿಗೆ ಬೋಧನಾ ಶುಲ್ಕ, ಬೋಧನೇತರ ಶುಲ್ಕ ₹ 185 ಹಾಗೂ ವಿಶೇಷ ಅಭಿವೃದ್ಧಿ ಶುಲ್ಕವಾಗಿ ₹ 500 ನಿಗದಿಪಡಿಸಲಾಗಿದೆ.

ಅನುದಾನರಹಿತ ಶಾಲೆಗಳಲ್ಲಿ 1ರಿಂದ 5ನೇ ತರಗತಿಗೆ ಬೋಧನೇತರ ಶುಲ್ಕ ಇಲ್ಲ. ಬೋಧನಾ ಶುಲ್ಕ ಆರ್‌ಟಿಇ ಕಾಯ್ದೆ ಸೆಕ್ಷನ್‌ 2ಬಿ ಅನ್ವಯ ವಿಶೇಷ ಅಭಿವೃದ್ಧಿ ಶುಲ್ಕ ₹ 600 ನಿಗದಿ ಪಡಿಸಲಾಗಿದೆ. 6ರಿಂದ 8ನೇ ತರಗತಿ ಬೋಧನಾ ಶುಲ್ಕ, ಬೋಧನೇತರ ಶುಲ್ಕ ₹ 38 ಹಾಗೂ ವಿಶೇಷ ಅಭಿವೃದ್ಧಿ ಶುಲ್ಕವಾಗಿ ₹ 600 ನಿಗದಿಯಾಗಿದೆ. 9 ಮತ್ತು 10ನೇ ತರಗತಿ ಬೋಧನಾ ಶುಲ್ಕ ಆರ್‌ಟಿಇ ಕಾಯ್ದೆ ಸೆಕ್ಷನ್ 2ಬಿ ಅನ್ವಯ ಹಾಗೂ ವಿಶೇಷ ಅಭಿವೃದ್ಧಿ ಶುಲ್ಕ ಮತ್ತು ಬೋಧನೇತರ ಶುಲ್ಕವಾಗಿ ₹ 185 ನಿಗದಿ ಮಾಡಲಾಗಿದೆ.

ಶಾಲೆಗಳು ಆರ್‌ಟಿಇ ಕಾಯ್ದೆ ಸೆಕ್ಷನ್ 2ಬಿ ಅನ್ವಯ ಶುಲ್ಕ ನಿಗದಿಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದು ಸೂಚನಾ ಫಲಕದಲ್ಲಿ ಸಾರ್ವ ಜನಿಕ ಮಾಹಿತಿಗಾಗಿ ಪ್ರಕಟಿಸಬೇಕಿದೆ.

ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಕಟ್ಟಡ ನಿಧಿಯನ್ನು ಒಂದು ಬಾರಿ ಮಾತ್ರ ಒಂದು ವರ್ಷದ ಬೋಧನಾ ಶುಲ್ಕ ಮೀರದಂತೆ ವಿದ್ಯಾರ್ಥಿಯಿಂದ ಪಡೆಯಬಹುದು.

ಡೊನೇಷನ್ ಪಡೆಯುವಂತಿಲ್ಲ. ಪಡೆದರೆ ವಸೂಲಿ ಮಾಡಿದ ಶುಲ್ಕದ 10ಪಟ್ಟು ದಂಡ ವಿಧಿಸಬಹುದಾಗಿದೆ. ಪ್ರವೇಶ ಅರ್ಜಿಗೆ ಗರಿಷ್ಠ ₹ 5 ಹಾಗೂ ಪ್ರಾಸ್‌ಪೆಕ್ಟಸ್‌ಗೆ ಗರಿಷ್ಠ ₹ 20 ಪಡೆಯಲು ಅವಕಾಶವಿದೆ.

ಅನುದಾನರಹಿತ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಮಕ್ಕಳಿಗೆ ನೀಡಬೇಕು. ಉಳಿದ ಶೇ 75ರಷ್ಟು ಸೀಟುಗಳನ್ನು ಪಾರದರ್ಶಕ ವಾಗಿ ತುಂಬಬೇಕು. ಮೀಸಲಿಟ್ಟಿರುವ ಸೀಟುಗಳ ಸಂಖ್ಯೆ, ಮಾಧ್ಯಮ ತರಗತಿ ಪ್ರವೇಶ ಪ್ರಕ್ರಿಯೆ, ವೇಳಾಪಟ್ಟಿ ಬೋಧನಾ ಶುಲ್ಕದ ಮಾಹಿತಿಯನ್ನು ಶಾಲಾ ಆವರಣದಲ್ಲಿ 4*6 ಅಳತೆಯ ಫ್ಲೆಕ್‌ನಲ್ಲಿ ಪ್ರಕಟಿಸಬೇಕು. ಇದರ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರಿಗೆ ಸಲ್ಲಿಸಬೇಕು.

ಈ  ಸೂಚನೆಗಳು ಪ್ರತಿ ಶಾಲೆಯಲ್ಲಿ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಖಾತ್ರಿಪಡಿಸಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಬೇಕು. ಡೊನೇಷನ್ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದರೆ ಪರಿಶೀಲಿಸಿ ಸರ್ಕಾರದ ನಿಯಮಾನುಸಾರ ನಿಗದಿತ ಶುಲ್ಕ ಪಡೆಯುವಂತೆ ಕ್ರಮಕೈಗೊಳ್ಳಬೇಕು.

‘ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂ ಲಾತಿಯಲ್ಲಿ ನಿಯಮಗಳ ಉಲ್ಲಂಘನೆ ಮಾಡಿದ ಪ್ರಕರಣಗಳ ಬಗ್ಗೆ ನಾಗರಿಕರು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಬಹುದು’ ಎಂದು ಡಿಡಿಪಿಐ ಎಸ್‌. ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.