ADVERTISEMENT

ಬತ್ತಿದ ಕೆರೆಗೆ ನೀರುಣಿಸುವ ಕಾಯಕ

ವನ್ಯಜೀವಿಗಳ ದಾಹ ನೀಗಿಸಲು ಸಮಾನ ಮನಸ್ಕ ಸ್ನೇಹಿತರ ಸೇವೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:47 IST
Last Updated 6 ಮಾರ್ಚ್ 2017, 10:47 IST
ಬತ್ತಿದ ಕೆರೆಗೆ ನೀರುಣಿಸುವ ಕಾಯಕ
ಬತ್ತಿದ ಕೆರೆಗೆ ನೀರುಣಿಸುವ ಕಾಯಕ   
ಯಳಂದೂರು: ದಿನೇ ದಿನೇ ಉಷ್ಣಾಂಶ ಏರುತ್ತಿದೆ. ಕಾಡ ಕೆರೆಗಳಲ್ಲಿ ಕೆಸರು ಕಾಣಸಿಕೊಂಡಿದೆ. ವನ್ಯ ಜೀವಿಗಳ ದಾಹ ನೀಗಿಸಲು ಕೆರೆಯಲ್ಲಿ ನೀರಿನ ಸುಳಿವಿಲ್ಲ. ಕಾಡಿನಲ್ಲಿ ಬತ್ತಿರುವ ಕೆರೆಗಳಿಗೆ ನೀರು ತುಂಬಿಸುವುದು ಕಷ್ಟದ ಕಾಯಕ ಕೂಡ. ಇದನ್ನು  ಮನಗಂಡು ಸಮಾನ ಮನಸ್ಕರ ಸಮೂಹ ಕಟ್ಟೆಗಳಿಗೆ ನೀರುಣಿಸಲು ಮುಂದಾಗಿದೆ. 
 
ಹೌದು. ಕೊಳ್ಳೇಗಾಲ ಮತ್ತು ಸುತ್ತ ಮುತ್ತಲ ಗ್ರಾಮಗಳ ಸೇವಾ ಮನೋ ಭಾವದ ಯುವಕರು ಇಂಥ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.
 
ಹುಲಿ ಅಭಯಾರಣ್ಯದ ಭಾಗವಾಗಿರುವ ಬಿಆರ್‌ಟಿಗೆ ಊರಂಚಿನಲ್ಲಿ ಲಭ್ಯ ನೀರಿನ ಮೂಲದಿಂದ ಟ್ಯಾಂಕರ್‌ನಲ್ಲಿ  ಸಂಗ್ರಹಿಸಿ ರಸ್ತೆಯಂಚಿನ ಕಟ್ಟೆಗಳಿಗೆ ಪೂರೈಸುತ್ತಿದ್ದಾರೆ.
 
‘ನಾವು ಸಂಘ ಇಲ್ಲವೇ ಸಂಸ್ಥೆಯ ಹೆಸರಿನಿಂದ ಕಾಯಕ ಮಾಡುತ್ತಿಲ್ಲ. ನಾವು ಮಾಡುವ ಕೆಲಸದಿಂದ ಇನ್ನಿತ ರರಿಗೆ ಸ್ಫೂರ್ತಿ ಸಿಕ್ಕರೆ ಸಾಕು. ಕನಿಷ್ಠ 1 ಕೆರೆಗೆ 20 ಸಾವಿರ ಲೀಟರ್ ನೀರು ಹರಿಸಲು ಒತ್ತು ನೀಡುತ್ತಿದ್ದೇವೆ. ವನ ಸುಮ, ಕಾಡುಜೀವಿಗಳ ದಾಹ ನೀಗಿದರೆ ಸಾಕು’ ಎನ್ನುತ್ತಾರೆ ಕಿರಣ್ ಮಿಠಾಯಿ, ಸರ್ವೇಶ್ ಹಾಗೂ ಸೂರ್ಯಕುಮಾರ್.
 
‘ಟ್ರ್ಯಾಕ್ಟರ್ ಮೂಲಕ ನೀರು ಸಂಗ್ರಹಿಸಿ ಎರೆಕಟ್ಟೆಗೆ ತುಂಬಿಸಿದ್ದೇವೆ. ನೀರು ಪೂರೈಸಲು ಅರಣ್ಯ ಅಧಿಕಾರಿಗಳ ಅನುಮತಿ ಅಗತ್ಯ. ಜೀವಜಾಲದ ಭಾಗವಾದ ಇಲ್ಲಿನ ಪರಿಸರಕ್ಕೆ ಶುದ್ಧ ಜಲ ವನ್ನೇ ಹಾಕಬೇಕು.  ಅರಣ್ಯ ಇಲಾಖೆಯ ಸಹಕಾರ ಸಿಕ್ಕಿದೆ. ಅವಕಾಶ ಸಿಕ್ಕರೆ ಇತರೆಡೆಯೂ ಮಾಡುತ್ತೇವೆ’ ಎನ್ನುತ್ತಾರೆ ವಾಸಿಂ, ಉಬೇದ್, ಕುಣಗಳ್ಳಿ ರವಿ ರಾಜೇಶ್.
 
‘ಮೇ ತಿಂಗಳವರೆಗೂ ಮಳೆ ಬರುವ ಲಕ್ಷಣಗಳಿಲ್ಲ.  ಅಲ್ಲಿಯವರೆಗೂ ಇದೇ ಸ್ಥಿತಿ ಇದ್ದು, ಕೆರೆ ಒಣಗಲಿದೆ. ಇದನ್ನು ತಪ್ಪಿಸಲು ಇದು ನಮ್ಮ ಅಳಿಲು ಸೇವೆ ಯಾಗಿದೆ’ ಎಂದು ಗೆಳೆಯರ ಗುಂಪಿನ ಸೋಮಶೇಖರ್‌, ಎಸ್‌. ಕಿರಣ್‌, ರಚನ್, ಮಂಜು, ಪ್ರಶಾಂತ್, ರಾಘು ಅವರು ಅಭಿಪ್ರಾಯಪಡುತ್ತಾರೆ.
 
13 ಹೊಂಡಗಳಲ್ಲಿ ಮಾತ್ರ ನೀರು
ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ 63 ಕೆರೆ ಗಳಿವೆ. ಕೇವಲ 13 ಹೊಂಡ ಗಳಲ್ಲಿ ನೀರಿದೆ.  ಸ್ವಯಂಸೇವಕರು ಕೆರೆಗಳಿಗೆ ನೀರು ತುಂಬಿಸಲು ಅನುಮತಿ ಕೋರಿದ್ದಾರೆ.  ಅರಣ್ಯ ಇಲಾಖೆ ಷರತ್ತಿಗೆ ಒಳಪಟ್ಟು ಅವ ಕಾಶ ನೀಡಲಿದೆ ಎಂದು ಯಳಂ ದೂರು ವಲಯ ಅರಣ್ಯಾಧಿಕಾರಿ ಮಹದೇವಯ್ಯ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.