ADVERTISEMENT

ಬೀದಿನಾಯಿ ಉಪಟಳ ಉಲ್ಬಣ

ಮನೆಯಿಂದ ಹೊರಬರಲು ಮಹಿಳೆಯರು, ಮಕ್ಕಳಿಗೆ ಭಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 11:08 IST
Last Updated 27 ಜೂನ್ 2016, 11:08 IST

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಆದರೆ, ಇವುಗಳ ಕಡಿವಾಣಕ್ಕೆ ನಗರಸಭೆ ಆಡಳಿತ ಮಾತ್ರ ಕ್ರಮಕೈಗೊಂಡಿಲ್ಲ. ನಗರದ ಯಾವುದೇ ಬಡಾವಣೆಗೆ ಭೇಟಿ ನೀಡಿದರೂ ಇವುಗಳ ಹಾವಳಿ ಸಾಮಾನ್ಯವಾಗಿದೆ.

ಮಾಂಸದ ಅಂಗಡಿಗಳು, ಹೋಟೆಲ್‌ ಗಳು, ಅಂಗಡಿಗಳ ಮುಂದೆ ನಾಯಿಗಳ ಉಪಟಳ ಹೆಚ್ಚಿದೆ. ಇವುಗಳ ಆರ್ಭಟಕ್ಕೆ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿ ಸಂಚರಿಸಲು ಭಯಪಡು ವಂತಾಗಿದೆ.

ಕಸಾಯಿಖಾನೆಗಳಲ್ಲಿ ಸಮರ್ಪಕ ವಾಗಿ ಮಾಂಸದ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಮಾಂಸದ ಚೂರು ಎಸೆಯಲಾಗುತ್ತಿದೆ. ಮಾಂಸದ ರುಚಿ ಕಂಡಿರುವ ನಾಯಿಗಳು ಜನರ ಮೇಲೂ ಎರಗುತ್ತಿವೆ.

ಅಲ್ಲದೆ, ಮನೆಗಳ ಮುಂದೆ ಕಟ್ಟಿರುವ ಕುರಿ, ಮೇಕೆಗಳು ಬೀದಿನಾಯಿ ಗಳಿಗೆ ಬಲಿಯಾಗುತ್ತಿವೆ. ರಾಮಸಮುದ್ರ ದಲ್ಲಿ ಇತ್ತೀಚೆಗೆ ಮನೆಯ ಹಿಂಭಾಗ ಕಟ್ಟಿದ್ದ ಕುರಿ, ಮೇಕೆಗಳು ನಾಯಿಗಳ ದಾಳಿಗೆ ಬಲಿಯಾಗಿದ್ದು, ಇನ್ನೂ ಹಸಿರಾಗಿದೆ. ರಾತ್ರಿ ವೇಳೆ ಕಬಾಬ್‌ ಅಂಗಡಿಗಳ ಮುಂದೆ ಸರಿದಾಡುವ ಬೀದಿನಾಯಿಗಳು ಮಾಂಸದ ರುಚಿ ಕಂಡಿವೆ.

ಈ ಅಂಗಡಿಗಳು ಕಾರ್ಯ ನಿರ್ವಹಿಸದಿರುವ ವೇಳೆ ನಾಗರಿಕರು ಸಾಕಿರುವ ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತವೆ. ಆದರೂ, ನಗರ ಸ್ಥಳೀಯ ಆಡಳಿತ ಮಾತ್ರ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಿಲ್ಲ ಎನ್ನುವುದು ಸಂತ್ರಸ್ತರ ಅಳಲು.

ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿದರೆ ಹಾವಳಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಜನರ ದೂರು.

‘ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಕಚ್ಚಲು ಓಡಿ ಬರುತ್ತವೆ. ಇದರಿಂದ ಭಯಪಡುವ ಹಲವು ಬೈಕ್‌ ಸವಾರರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ, ಬೀದಿ ನಾಯಿಗಳ ಹಾವಳಿ ತಡೆಗೆ ಕೂಡಲೇ ನಗರ ಸ್ಥಳೀಯ ಆಡಳಿತ ಕ್ರಮಕೈಗೊಳ್ಳ ಬೇಕು’ ಎಂದು ಒತ್ತಾಯಿಸುತ್ತಾರೆ ಬೈಕ್‌ ಸವಾರ ದಿನೇಶ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.