ADVERTISEMENT

ಬೆಳೆ ವಿಮೆ ಸಂಗ್ರಹಣೆ; ಜಿಲ್ಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:47 IST
Last Updated 31 ಡಿಸೆಂಬರ್ 2016, 6:47 IST

ಚಾಮರಾಜನಗರ: ‘ಹಿಂಗಾರು ಹಂಗಾಮಿನ ಬೆಳೆ ವಿಮೆ ಸಂಗ್ರಹಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆಯಡಿ ಹಿಂಗಾರು ಹಂಗಾಮಿಗೆ ಈಗಾಗಲೇ ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ ಬೆಳೆಗಳಿಗೆ ವಿಮೆ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಶೇ 90ರಷ್ಟು ರೈತರಿಂದ ಬೆಳೆವಿಮೆ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿಸಿದರು.

ಸದಸ್ಯ ಮಹೇಶ್ ಮಾತನಾಡಿ, ಹಿಂಗಾರು ಬೆಳೆಗಾಗಿ ತಮ್ಮ ಪಾಲಿನ ವಿಮೆ ವಂತಿಗೆ ಸಲ್ಲಿಸಲು ರೈತರಿಗೆ ಡಿ. 31ಕಡೆಯ ದಿನ. ರೈತರಿಂದ ವಿಮೆ ಸಂಗ್ರಹಣೆ ಮಾಡಲು ಸಮರ್ಪಕವಾಗಿ ಸಿಬ್ಬಂದಿ ನಿಯೋಜಿಸಿಲ್ಲ. ಇದರಿಂದ ಜಿಲ್ಲೆಯ ಬಹುತೇಕ ರೈತರು ಇನ್ನೂ ಬೆಳೆ ವಿಮೆ ಪಾವತಿಸಿಲ್ಲ. ಹೀಗಾಗಿ ವಿಮೆ ಸಂಗ್ರಹಣೆ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ನಾಡ ಕಚೇರಿಯಲ್ಲಿ ಪಹಣಿ ಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ರೈತರು ತಮ್ಮ ಕೆಲಸವನ್ನು ಬಿಟ್ಟು ನಾಡ ಕಚೇರಿಗಳಲ್ಲಿ ಕಾಯುತ್ತಿದ್ದಾರೆ ಎಂದು ಸದಸ್ಯರು ದೂರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ಅರ್ಹ ರೈತರಿಂದ ಬೆಳೆ ವಿಮೆ ಸಂಗ್ರಹಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲ್ಲೇಶ ಮಾತನಾಡಿ, ಜಿಲ್ಲೆಯಲ್ಲಿ 16,832 ಜನ ರೈತರು ಬೆಳೆ ವಿಮೆ ಪಾವತಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಡಿ 20ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 12ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದರು.

ಹಿಂಗಾರು ಹಂಗಾಮಿನಡಿ ವಿಮೆ ಪಾವತಿಸಲು ಡಿ. 31ಕಡೆಯ ದಿನವಾಗಿದೆ. ಹೀಗಾಗಿ, ಜಿಲ್ಲೆಯ ಎಲ್ಲ ನಾಡ ಕಚೇರಿಯಲ್ಲಿ ಕಳೆದೆರಡು ದಿನಗಳಿಂದ 1500ಕ್ಕೂ ಹೆಚ್ಚು ರೈತರು ಬೆಳೆ ವಿಮೆ ಪಾವತಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಈ ಮೊದಲು ವಿಮೆ ಹಣವನ್ನು ಬ್ಯಾಂಕ್‌ಗಳಲ್ಲಿ ಪಾವತಿಸಲಾಗುತ್ತಿತ್ತು. ಆದರೆ, ಐನೂರು ಹಾಗೂ ಸಾವಿರ ನೋಟುಗಳನ್ನು ರದ್ದು ಮಾಡಿರುವುದರಿಂದ ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚಿನ ಒತ್ತಡವಿದ್ದು, ಇಲಾಖೆಯಿಂದ ಸಂಗ್ರಹಿಸಲಾಗುತ್ತಿದೆ. ಸಿಬ್ಬಂದಿಯ ಕೊರತೆಯಿಂದ ರೈತರು ನಾಡ ಕಚೇರಿಯ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ  ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಎಸ್‌. ಬಸವರಾಜು ಹಾಜರಿದ್ದರು.

ಆರೋಗ್ಯ ರಕ್ಷಾ ಸಮಿತಿಯಿಂದ ₹ 1ಲಕ್ಷ
ಚಾಮರಾಜನಗರ: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ₹ 1ಲಕ್ಷ ಅನುದಾನ ನೀಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್‌ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಕೆಂದ್ರಗಳಿಗೆ ಆರೋಗ್ಯ ರಕ್ಷ ಸಮಿತಿಯಿಂದ ಮೊದಲ ಹಂತದಲ್ಲಿ ₹ 50 ಸಾವಿರ ಅನುದಾನ ನೀಡಲಾಗುತ್ತದೆ. ಈ ಅನುದಾನದಡಿ ಕೇಂದ್ರದಲ್ಲಿ ಹೊರ ರೋಗಿಗಳ ಸಂಖ್ಯೆ, ಪ್ರಯೋಗಾಲಯ ಹಾಗೂ ಗರ್ಭಿಣಿಯರ ಚಿಕಿತ್ಸೆಯಲ್ಲಿನ ಸಾಧನೆಗೆ ಅನುಗುಣವಾಗಿ 2ನೇ ಹಂತದಲ್ಲಿ ಉಳಿದ ಅನುದಾನ ನೀಡಲಾಗುತ್ತದೆ ಎಂದು ವಿವರಿಸಿದರು.

ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ಅರಳಿಕಟ್ಟೆಯಲ್ಲಿನ ಪ್ರಾಥಮಿಕ ಕೇಂದ್ರದ ವೈದ್ಯರಿಗೆ ಕಳೆದ 8 ತಿಂಗಳಿನಿಂದ ವೇತನ ನೀಡಿಲ್ಲ. ಡಿ ಗ್ರೂಪ್‌ ನೌಕರರಿಗೆ ಕಳೆದ 10ತಿಂಗಳಿಂದ ವೇತನ ನೀಡಿಲ್ಲ ಎಂದು ಆಗ್ರಹಿಸಿದರು. ಡಾ.ಪ್ರಸಾದ್‌ ಮಾತನಾಡಿ, ಅರಳಿಕಟ್ಟೆ ವೈದ್ಯರಿಗೆ ಕೂಡಲೇ ವೇತನ ಬಿಡುಗಡೆ ಮಾಡಲಾಗವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT