ADVERTISEMENT

ಭಾಷೆಯ ಸ್ಪಷ್ಟತೆಗೆ ರಂಗಭೂಮಿ ಸಹಕಾರಿ

ರಂಗೋತ್ಸವ ಸಮಾರೋಪ ಸಮಾರಂಭದಲ್ಲಿ ಡಾ.ಎಚ್‌.ಕೆ.ರಾಮನಾಥ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 7:01 IST
Last Updated 7 ಡಿಸೆಂಬರ್ 2017, 7:01 IST

ಚಾಮರಾಜನಗರ: ‘ವಿದ್ಯಾರ್ಥಿಗಳು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಭಾಷೆಯ ಮೇಲೆ ಹಿಡಿತ ಕಾಪಾಡಿಕೊಳ್ಳಲು ಸಾಧ್ಯ’ ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಶ್ರವಣ ಕಾರ್ಯಕ್ರಮ ನಿರ್ಮಾಪಕ ಡಾ.ಎಚ್.ಕೆ. ರಾಮನಾಥ್‌ ಹೇಳಿದರು.

ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಜೆಎಸ್‌ಎಸ್‌ ಕಲಾಮಂಟಪದಿಂದ 3 ದಿನ ನಡೆದ ಜೆಎಸ್‌ಎಸ್‌ ರಂಗೋತ್ಸ ವದ ಸಮಾರೋಪದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಭಾಷೆಯ ಸ್ಪಷ್ಟತೆ, ಮಾತುಗಾರಿಕೆ, ದೈಹಿಕ ಭಾಷೆ ಕರಗತ ಮಾಡಿಕೊಳ್ಳುವುದಕ್ಕೆ ಮುಖ್ಯ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಓದಿನ ಜತೆಗೆ, ರಂಗಭೂಮಿ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಕಾವ್ಯೇಷು ನಾಟಕಂ ರಮ್ಯಂ’ ಎಂಬ ಕಾಳಿದಾಸ ಕವಿಯ ಮಾತಿನಂತೆ ಸಾಹಿತ್ಯದ ಪ್ರಕಾರಗಳಲ್ಲಿ ನಾಟಕವು ಮನಸೆಳೆಯುವ ರಮಣೀಯವಾದ ದೃಶ್ಯ ಮಾಧ್ಯಮವಾಗಿದೆ. ಇದೊಂದು ಸಂಕೀರ್ಣ ಕಲೆ. ಇದು ಸಂಗೀತ, ನೃತ್ಯ, ಸಂಭಾಷಣೆ, ಕಥೆ, ಪ್ರಸಾಧನ, ವಸ್ತ್ರಾಲಂಕಾರ ಎಲ್ಲವನ್ನೂ ಒಳಗೊಂಡಿದೆ ಎಂದು ವಿವರಿಸಿದರು.

ಇಹಲೋಕದ ಸುಖಕ್ಕೆ ಹಣಬೇಕು. ಜನ್ಮಜನಾಂತರ ಸುಖಕ್ಕೆ ಕಲೆಬೇಕು. ಹಾಗಾಗಿ, ವಿದ್ಯಾರ್ಥಿಗಳು 64 ಕಲೆಗಳಲ್ಲಿ ಯಾವುದಾದರೂ ಒಂದು ಕಲೆಯನ್ನು ಕಲಿಯಬೇಕು. ಆಗ ಮಾತ್ರ ಮನುಷ್ಯ ಜನ್ಮ ಸಿದ್ಧಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಮಹದೇವಪ್ಪ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಎಲ್ಲರೂ ರಂಗಭೂಮಿ ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಬೇಕು. ಇದರಿಂದ ಭವಿಷ್ಯದಲ್ಲಿ ಶಿಕ್ಷಕ ವೃತ್ತಿಗೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾದ ಮಹಾಲಿಂಗಪ್ಪ, ಬಿ.ಪಿ. ನಂಜುಂಡ ಸ್ವಾಮಿ, ರಂಗೋತ್ಸವ ಸಂಯೋಜಕರಾದ ಚಂದ್ರಶೇಖರಾಚಾರ್‌ ಹಾಜರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ, ಪ್ರೊ.ಟಿ.ಕೆ. ರಾಮಚಂದ್ರ ಅವರ ರಚನೆಯ, ಚಂದ್ರಶೇಖರಾಚಾರ್‌ ಸಂಗೀತ, ಶಕುಂತಲಾ ಹೆಗ್ಗಡೆ ನಿರ್ದೇಶನದ ‘ದ್ರೋಣ ಪ್ರತಿಜ್ಞೆ’ ನಾಟಕವನ್ನು ಮೈಸೂರಿನ ಸಿದ್ಧಾರ್ಥ ನಗರದ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.