ADVERTISEMENT

‘ಮತದಾರರ ಕೈಯಲ್ಲಿ ರಾಷ್ಟ್ರದ ಭವಿಷ್ಯ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:38 IST
Last Updated 11 ನವೆಂಬರ್ 2017, 5:38 IST

ಯಳಂದೂರು: ಚುನಾವಣಾ ಸಮಯದಲ್ಲಿ ಮತದಾರರು ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಂವಿಧಾನ ರಚನೆಯ ಆಶೋತ್ತರಗಳನ್ನು ಈಡೇರಿಸಬೇಕು. ಆ ಮೂಲಕ ಸುಭದ್ರ ದೇಶ ನಿರ್ಮಿಸಲು ಕಾರ್ಯ ಪ್ರವೃತರಾಗಬೇಕು ಎಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹಳಷ್ಟು ಜನರು ಚುನಾವಣಾ ಸಮಯದಲ್ಲಿ ಮತ ಚಲಾಯಿಸದೇ ನಿರ್ಲಕ್ಷಿಸುತ್ತಾರೆ. ಕೆಲವರು ಹಣ, ಆಮಿಷಕ್ಕೆ ಒಳಗಾಗಿ ಮತದ ಪಾವಿತ್ರ್ಯವನ್ನು ಮರೆಯುತ್ತಾರೆ. ಇದರಿಂದ ಉತ್ತಮ ಜನ ನಾಯಕರನ್ನು ಆಯ್ಕೆ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭ ಮಕ್ಕಳು ತಮ್ಮ ಮನೆಯ ಸುತ್ತಮುತ್ತಲ ಜನ ಸಮೂಹಕ್ಕೆ ಮತದಾನದ ಮಹತ್ವವನ್ನು ತಿಳಿಸಬೇಕು. ಪೋಷಕರನ್ನು ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಮಾತನಾಡಿ, ಮತದಾನದ ಸಂದರ್ಭದಲ್ಲಿ ಎಲ್ಲ ಕಚೇರಿಗಳಿಗೆ, ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಅಂತಹ ಅವಕಾಶವನ್ನು ಪ್ರವಾಸ ಇಲ್ಲವೇ ಪಿಕ್ನಿಕ್‌ಗಾಗಿ ಬಳಸಬಾರದು. ಮತಗಟ್ಟೆಗೆ ತೆರಳಿ ಮತದಾನ ಮೂಲಕ ಉತ್ತಮ ಜನ ಪ್ರತಿನಿಧಿಗಳನ್ನು ಆರಿಸಬೇಕು.

ಐದು ನಿಮಿಷ ಕಾಯ್ದು ವೋಟು ಹಾಕುವುದರಿಂದ ಐದು ವರ್ಷಗಳಿಗೆ ಒಮ್ಮೆ ಬರುವ ಚುನಾವಣೆಗಳಲ್ಲಿ ತಮ್ಮ ನಾಯಕನ ಆಯ್ಕೆ ಮಾಡುವ ಅವಕಾಶ ಲಭಿಸುತ್ತದೆ. ಹಾಗಾಗಿ, ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗಬಾರದು ಎಂದು ಸಲಹೆ ನೀಡಿದರು. ಚಿತ್ರಕಲಾ ಶಿಕ್ಷಕ ರಘು, ಮಹದೇವ, ಮಂಜುನಾಥ್, ಪ್ರಭುಸ್ವಾಮಿ ಹಾಗೂ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.