ADVERTISEMENT

‘ಮತದಾರರ ತೀರ್ಪಿಗೆ ತಲೆ ಬಾಗುತ್ತೇನೆ’

ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:34 IST
Last Updated 14 ಏಪ್ರಿಲ್ 2017, 8:34 IST
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನ್‌ಕುಮಾರ್‌
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನ್‌ಕುಮಾರ್‌   

ಚಾಮರಾಜನಗರ: ‘ಕ್ಷೇತ್ರದ ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಈ ಸೋಲಿನಿಂದ ನಾನು ಎದೆಗುಂದುವುದಿಲ್ಲ. ನನಗೆ ಮತ ನೀಡಿರುವ ಜನರ ಹಿತಕಾಯಲು ಬದ್ಧ. ಅವರ ಸಮಸ್ಯೆ ಬಗೆಹರಿಸಲು ಹೋರಾಟ ಮುಂದುವರಿಸುತ್ತೇನೆ’ ಎಂದು ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನ್‌ಕುಮಾರ್‌ ಪ್ರತಿಕ್ರಿಯಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ನಿಂದ ಹಣದ ಹೊಳೆ ಹರಿದಿದೆ. ಆಡಳಿತ ಯಂತ್ರದ ದುರುಪಯೋಗವಾಗಿದೆ. ಆದರೆ, ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದರು.

‘ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇತ್ತು. ಆದರೆ, ಈ ಸೋಲು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದರು.

‘ನಾನು ಸೋತ ತಕ್ಷಣ ಮನೆಯಲ್ಲಿ ಕೂರುವುದಿಲ್ಲ. ಕ್ಷೇತ್ರದಲ್ಲಿ ಸಕ್ರಿಯನಾಗಿರುತ್ತೇನೆ. ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರಿಹರಿಸುತ್ತೇನೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖಂಡರಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಬಿ. ಶ್ರೀರಾಮುಲು ಸೇರಿದಂತೆ ಹಲವು ಮುಖಂಡರು ದೂರವಾಣಿ ಕರೆ ಮಾಡಿ ಸಮಾಧಾನ ಹೇಳಿದ್ದಾರೆ. ಅವರೆಲ್ಲರೂ ಸಾಕಷ್ಟು ಶ್ರಮವಹಿಸಿದ್ದರು. ಈ ಶ್ರಮ ವ್ಯರ್ಥವಾಗಿರುವ ಬಗ್ಗೆ ನನಗೆ ದುಃಖವಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.