ADVERTISEMENT

ಮಾವಿಗೂ ತಟ್ಟಿದ ಬಿಸಿಲಬೇಗೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:30 IST
Last Updated 13 ಏಪ್ರಿಲ್ 2017, 7:30 IST
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಬಳಿ ತೋಟದಲ್ಲಿ ಬರದಿಂದಾಗಿ ಈ ಬಾರಿಯೂ ಮಾವಿನ ಫಲವತ್ತತೆ ಕುಸಿದಿದೆ (ಎಡಚಿತ್ರ). ಫಲಕಚ್ಚದೆ ಉದುರುತ್ತಿರುವ ಮಾವಿನ ಕಾಯಿ
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಬಳಿ ತೋಟದಲ್ಲಿ ಬರದಿಂದಾಗಿ ಈ ಬಾರಿಯೂ ಮಾವಿನ ಫಲವತ್ತತೆ ಕುಸಿದಿದೆ (ಎಡಚಿತ್ರ). ಫಲಕಚ್ಚದೆ ಉದುರುತ್ತಿರುವ ಮಾವಿನ ಕಾಯಿ   

ಯಳಂದೂರು:  ಅತಿಯಾದ ಉಷ್ಣತೆ ಮತ್ತು ಬಿಸಿಲ ಬೇಗೆ ಮಾವಿನ ಫಲಕ್ಕೂ ಬಿಸಿ ಮುಟ್ಟಿಸಿದೆ.  ಪರಿಣಾಮ ಇಳುವರಿ ಕುಸಿದು, ಕೀಟದ ಹಾವಳಿ ಹೆಚ್ಚಾಗಿದೆ.ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದ ಮಾವು ಕೃಷಿಕರು ಈ ಬಾರಿಯೂ ಲಾಭದ ಆಸೆ ಬಿಟ್ಟಿದ್ದಾರೆ.ಜೊತೆಗೆ ಬೂದಿರೋಗ, ಹಣ್ಣಿನ ನೊಣ, ರಸ ಹೀರುವ ಕೀಟಗಳ ಹಾವಳಿಯೂ ಮಾವಿಗೆ ಅಮರಿಕೊಂಡಿದೆ.

ತಾಲ್ಲೂಕಿನಲ್ಲಿ ಪ್ರತಿವರ್ಷ 1 ಸಾವಿರ ಟನ್‌ಗೂ ಅಧಿಕ ಮಾವು ಬೆಳೆಯಲಾಗುತ್ತಿತ್ತು. ಸತತ ಬಿಸಿಲಿನಿಂದಾಗಿ ಕಾಯಿ ಉದುರಿ ಭೀತಿಗೆ ಒಳಗಾಗಿದೆ. ಮರದಲ್ಲೂ ನಿರೀಕ್ಷಿತ ಕಾಯಿ ಕಾಣುತ್ತಿಲ್ಲ. ರೈತರು ಪರಿತಪಿಸಿವಂತೆ ಆಗಿದೆ.

‘ನನ್ನ ತೋಟದಲ್ಲಿ ಈಗಾಗಲೇ ಫಲ ಬಿಟ್ಟಿದೆ. ಗಾತ್ರ ಹೇಳಿಕೊಳ್ಳುವಂತಿಲ್ಲ. ಕಾವು ಹೆಚ್ಚುತ್ತಲೇ ಕಾಯಿ ಉದುರುವ ಹಂತ ತಲುಪಿದೆ. ಹಳದಿ ವರ್ಣಕ್ಕೆ ತಿರುಗಿವೆ. ಈ ವರ್ಷ 5ಟನ್‌ ಬರುವ ನಿರೀಕ್ಷೆ ಇತ್ತು. ಮಳೆಯ ಆಸರೆಯೂ ಕೈ ತಪ್ಪಿ ಮಾವು ಬೆಳೆಯೂ ನಷ್ಟವಾಗಿದೆ ಎನ್ನುತ್ತಾರೆ ಯಳಂದೂರಿನ ರೈತ ಹಬೀಬುಲ್ಲಾ ಖಾನ್.

ADVERTISEMENT

ಕಟ್ಟುವ ಹಂತದಲ್ಲಿ ಕೀಟದ ಕಾಟ ಇತ್ತು. ಇವು ಅಂಟು ಪದಾರ್ಥವನ್ನು ಸ್ರವಿಸಿ ಕಪ್ಪು ಬೂಷ್ಟ್‌ ಬೆಳೆವಣಿಗೆ ತಂದಿತ್ತು. ನಂತರ ಹೂ ಗೊಂಚಲು ಮತ್ತು ಎಲೆಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದಿತ್ತು.

ಎಲೆಗಳು ಮುರುಟಿ, ಕಾಯಿ ಕೂಡ ಉದುರುವ ಹಂತ ಮುಟ್ಟಿತು. ಕಾಯಿ ಹಳದಿ ಬಣ್ಣಕ್ಕೆ ತಿರುಗಿದ ನಂತರ ನೊಣಗಳ ಹಾವಳಿ ಹೆಚ್ಚಾಯಿತು. ಹಣ್ಣಿನ ಮೇಲೆ ಕಪ್ಪು ಚುಕ್ಕೆಗಳಾಗಿ ಕೊಳೆತು ಹೋಗುತ್ತವೆ ಎನ್ನುತ್ತಾರೆ ಬಹಳಷ್ಟು ರೈತರು.

ಆತಂಕ ಬೇಡ: ನಾಲ್ಕು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರ ಜೊತೆಗೆ ಉಷ್ಣಾಂಶವೂ ಹೆಚ್ಚಿದೆ. ಈಗಾಗಲೇ ಫಸಲು ಕೊಯ್ಲಿನ ಹಂತ ಮುಟ್ಟಿದೆ. ಕೆಲೆವೆಡೆ ಕಾಯಿ ಉದುರು ಸ್ಥಿತಿ ಬಂದಿದೆ ಎನ್ನುತ್ತಾರೆ ಕೃಷಿತಜ್ಞರು.

ಹೀಗೆ ಮಾಡಿ:  ಬೂದಿರೋಗ ಕಂಡಾಗ ಕಾಯಿಗೆ ನೀರಿನಲ್ಲಿ ಕರಗುವ 3 ಗ್ರಾಂ ಗಂಧಕವನ್ನು 1ಲೀಟರ್‌ ನೀರಿನಲ್ಲಿ ಕರಗಿಸಿ ಸಿಂಪಡಣೆ ಪುನಾರಾವರ್ತಿಸಬೇಕು. ಅರ್ಧ ಎಂಎಲ್‌ ಕಾನ್‌ಪಿಡರ್‌ 1ಲೀಟರ್‌ ನೀರಿನಲ್ಲಿ ಸೇರಿಸಿ ಸಿಂಪಡಣೆ ಮಾಡಬೇಕು.

ನೊಣದ ಹಾವಳಿ ನಿಯಂತ್ರಿಸಲು ಮೋಹಕ ಬಲೆಗಳನ್ನು ತೂಗು ಹಾಕುವ ಮೂಲಕ ನಿಯಂತ್ರಿಸಬಹುದು. 2 ಎಂಎಲ್‌ ಮೆಲಾಥಿಯಾನ್‌  ಪ್ರತಿ ಲೀಟರ್ ನೀರಿಗೆ  ಸೇರಿಸಿ ದ್ರಾವಣ ತಯಾರಿಸಬೇಕು. ಇದನ್ನು  ಬಳಸಿ ನೊಣ ಬರದಂತೆ ತಡೆಯಬಹುದು ಎನ್ನುತ್ತಾರೆ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞ ಶಿವರಾಯನಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.