ADVERTISEMENT

ರಸ್ತೆಯಲ್ಲಿ ಗುಂಡಿ: ಬೀಳುವ ಭಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 7:05 IST
Last Updated 22 ಸೆಪ್ಟೆಂಬರ್ 2017, 7:05 IST
ಗುಂಡ್ಲುಪೇಟೆ ಪಟ್ಟಣದ ರಸ್ತೆ ಗುಂಡಿಗಳಿಂದ ಆವೃತವಾಗಿರುವುದು
ಗುಂಡ್ಲುಪೇಟೆ ಪಟ್ಟಣದ ರಸ್ತೆ ಗುಂಡಿಗಳಿಂದ ಆವೃತವಾಗಿರುವುದು   

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ರಸ್ತೆಗಳಾದ ಹಳೆಬಸ್ ನಿಲ್ದಾಣದ ರಸ್ತೆ ಮತ್ತು ಚಾಮರಾಜನಗರಕ್ಕೆ ಹೋಗುವ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಚಾಮರಾಜ ನಗರದಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚಾರಿಸುತ್ತವೆ. ಆದರೆ, ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗುಂಡಿಗಳಿಂದ ಚಾಲಕರು ಜೀವಭಯದಿಂದ ವಾಹನ ಚಾಲನೆ ಮಾಡುವಂತಾಗಿದೆ.

ರಸ್ತೆಯ ಸಮೀಪ ಕೆ.ಎಸ್. ನಾಗರತ್ನಮ್ಮ ಶಿಕ್ಷಣ ಸಂಸ್ಥೆ ಇರುವುದರಿಂದ ನೂರಾರು ಮಕ್ಕಳು ಓಡಾಡುತ್ತಾರೆ. ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದುಕೊಂಡು ಹೋಗಲು ದ್ವಿಚಕ್ರವಾಹನಗಳನ್ನು ಬಳಸುತ್ತಾರೆ. ರಸ್ತೆ ಹದಗೆಟ್ಟಿರುವುದರಿಂದ ಪ್ರವಾಸಿ ಮಂದಿರದ ಬಳಿಯೇ ವಾಹನ ನಿಲ್ಲಿಸಿ ಮಕ್ಕಳನ್ನು ಕಾಲ್ನಡಿಗೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

‘ಇಲ್ಲಿ ಸಾಗುವಾಗ ಯಾವಾಗ ಬಿಳುತ್ತೇವೋ ಎಂಬ ಭಯವಾಗುತ್ತದೆ. ಬೈಕ್‌ನಲ್ಲಿ ಮಕ್ಕಳನ್ನು ಕರೆತಂದಿರುತ್ತೇವೆ. ಸುರಕ್ಷತೆಯ ಸೃಷ್ಟಿಯಿಂದ ದೂರದಲ್ಲಿಯೇ ವಾಹನ ನಿಲ್ಲಿಸಿ ನಡೆದುಕೊಂಡು ತೆರಳುತ್ತೇವೆ.

ADVERTISEMENT

ರಸ್ತೆಯ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ’ ಎಂದು ಪಟ್ಟಣದ ನಿವಾಸಿ ರಾಜು ಬೇಸರ ವ್ಯಕ್ತಪಡಿಸಿದರು. ಪ್ರವಾಸಿ ಮಂದಿರದಿಂದ ಯೋಧ ಶಿವಾನಂದ ವೃತ್ತದವರೆಗೆ 3 ವರ್ಷದ ಹಿಂದೆ ₹ 1.3 ಕೋಟಿ ವೆಚ್ಚದಡಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. 20 ಮೀಟರ್ ವಿಸ್ತಾರ ಹೊಂದಿದ್ದು, ತಲಾ 7ಮೀಟರ್‌ನ ಜೋಡಿ ರಸ್ತೆಯಿದೆ. ಎರಡು ಮೀಟರ್ ಚರಂಡಿ ಹಾಗೂ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ.

‘ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಗುಂಡಿಗಳಾಗಿದೆ. ಅಧಿಕಾರಿಗಳು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ. ಗುಣಮಟ್ಟದ ಕಾಮಗಾರಿ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ’ ಎನ್ನುವುದು ಸಾರ್ವಜನಿಕರು ಆರೋಪ.

‘ಮಳೆಯಾದರಂತೂ ಸಮಸ್ಯೆ ಹೆಚ್ಚಾಗುತ್ತದೆ. ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗುತ್ತದೆ. ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದೆ’ ಎಂದು ಪಟ್ಟಣದ ನಿವಾಸಿ ಅಬ್ದುಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.