ADVERTISEMENT

ರೈತ ಸಂಘದ ಸದಸ್ಯರಿಂದ ಪ್ರತಿಭಟನೆ

ಎತ್ತಿನಗಾಡಿಯಲ್ಲಿ ಮರಳು ಸಾಗಣೆ: ಪೊಲೀಸರಿಂದ ವಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:46 IST
Last Updated 3 ಮಾರ್ಚ್ 2017, 6:46 IST

ಯಳಂದೂರು: ಎತ್ತಿನಗಾಡಿಗಳಲ್ಲಿ ಶೌಚಾಲಯ ನಿರ್ಮಿಸಲು ಮರಳು ಸಾಗಾಣಿಕೆ ಮಾಡುತ್ತಿದ್ದ ರೈತರನ್ನು ಗಾಡಿ ಸಮೇತ ಹಿಡಿದ ಪೊಲೀಸರ ಕ್ರಮವನ್ನು ಖಂಡಿಸಿ ರೈತ ಸಂಘದ ಸದಸ್ಯರು ಗುರುವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಪ್ರತಿಭಟನೆ ನಡೆಸಿದರು.

ಈಚೆಗೆ ಸಂತೆಮರಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿ ಕಾರಿಗಳು ಮನೆ ಹಾಗೂ ಶೌಚಾಲಯ ನಿರ್ಮಿಸಲು ಮರಳು ಸಾಗಿಸುವ ಎತ್ತಿನ ಗಾಡಿಗಳನ್ನು ಹಿಡಿಯಬೇಡಿ ಎಂದು ಮೌಖಿಕ ಆದೇಶ ನೀಡಿದ್ದಾರೆ.  ಆದರೆ, ಪೊಲೀಸರು ಬೇಕೆಂತಲೇ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಟ್ಟಡ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳು ಸಾಗಿಸಲು ಕಳೆದ ವರ್ಷ 9 ನೇ ತಿಂಗಳಿನಲ್ಲಿ ಆದೇಶ ವಿದ್ದರೂ ಇದನ್ನು ಗ್ರಾಮ ಪಂಚಾ ಯಿತಿಯ ಪಿಡಿಒಗಳು ಯಾರಿಗೂ ತಿಳಿಸಿಲ್ಲ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಆರೋಪಿಸಿದರು.

ಖಂಡಿಸಿ ಎತ್ತಿನ ಗಾಡಿಯಲ್ಲೇ ಇದ್ದ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡರು. ಈ ಸಂದರ್ಭದಲ್ಲಿ ಇತರ ರೈತರು ಇವರಿಂದ ಹಗ್ಗವನ್ನು ಕಸಿದುಕೊಂಡ ಘಟನೆ ಜರುಗಿತು.

ಸ್ಥಳಕ್ಕೆ ತಹಶೀಲ್ದಾರ್ ಕೆ. ಚಂದ್ರಮೌಳಿ ಹಾಗೂ ಸಿಪಿಐ ಶಿವಸ್ವಾಮಿ ಭೇಟಿ ನೀಡಿ ಮರಳು ಸಾಗಣಿಕೆ ಬಗ್ಗೆ ಜಿಲ್ಲಾಧಿಕಾರಿ ಅವರ ಲಿಖಿತ ಆದೇಶವಿಲ್ಲದ ಕಾರಣ ದೂರು ದಾಖಲಿಸಿಲ್ಲ. ಆದರೆ, ದಂಡ ವನ್ನು ಪಾವತಿಸಿ ಎತ್ತಿನ ಗಾಡಿಗಳನ್ನು ಬಿಡಲಾಗುವುದು ಎಂದರು.

ನಂತರ ತಹಶೀಲ್ದಾರ್ ಕಚೇರಿಗೆ ತೆರಳಿದ ರೈತರು ಇನ್ನು ಮುಂದೆ ಗ್ರಾಮ ಪಂಚಾಯಿತಿ ಅನುಮತಿಯನ್ನು ಪಡೆದು ಕೊಂಡು ಶೌಚಾಲಯ ಹಾಗೂ ಮನೆ ಗಳಿಗೆ ಬೇಕಾಗುವಷ್ಟು ಮರಳನ್ನು ಪಡೆದು ಕೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ನಂತರ ಎತ್ತಿನ ಗಾಡಿ ಮಾಲೀಕರಾದ ಮರಯ್ಯ ಹಾಗೂ ಕಾರ್ತಿಕ್ ಎಂಬುವ ವರಿಗೆ ತಲಾ ₹ 1 ಸಾವಿರ  ದಂಡ ವಿಧಿಸಿ ಮರಳು ಸಮೇತ ವಾಪಸ್ ಬಿಡಲಾಯಿತು.

ರೈತ ಸಂಘದ ಬಸವಣ್ಣ, ಸಿದ್ದಲಿಂಗ ಸ್ವಾಮಿ, ವೃಷಬೇಂದ್ರ, ಗುರುಸಿದ್ದಯ್ಯ, ಮಹದೇವಸ್ವಾಮಿ, ಶಿವಕುಮಾರ್‌, ದುಂಡುಮಾದಶೆಟ್ಟಿ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.