ADVERTISEMENT

ರೈಲ್ವೆ ಸೌಲಭ್ಯ ಕೋರಿ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:38 IST
Last Updated 12 ಜನವರಿ 2017, 8:38 IST

ಚಾಮರಾಜನಗರ:  2017–18ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರಿಗೆ ಸಂಸದ ಆರ್.ಧ್ರುವ ನಾರಾಯಣ ಮನವಿ ಮಾಡಿದ್ದಾರೆ.

ನಂಜನಗೂಡು ಪಟ್ಟಣದಲ್ಲಿ ರೈಲ್ವೆ ಮೇಲುಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಬೇಕು. ದೊಡ್ಡ ಕೌಲಂದೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ಜತೆಗೆ, ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ನಿರ್ಮಿಸಬೇಕು ಎಂದು ಕೋರಿದ್ದಾರೆ.

ಚಾಮರಾಜ ನಗರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್‌ ರೈಲು ಪ್ರಾರಂಭಿಸ ಬೇಕು. ಮೈಸೂರು– ಹುಬ್ಬಳ್ಳಿ, ಮೈಸೂರು– ಶಿವಮೊಗ್ಗ ರೈಲನ್ನು ಚಾಮರಾಜನಗರದವರೆಗೂ ವಿಸ್ತರಿಸಬೇಕು. ಚಾಮರಾಜನಗರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸ ಬೇಕು ಎಂದು ಮನವಿ ಮಾಡಿದ್ದಾರೆ.

ಚಾಮರಾಜ ನಗರದಿಂದ ಮೈಸೂರಿನ ವರೆಗೆ ಬೆಳಿಗ್ಗೆ 10.30ರಿಂದ ಸಂಜೆ 3ಗಂಟೆಯೊಳಗೆ ಮತ್ತೊಂದು ರೈಲು ಸಂಚಾರ ಪ್ರಾರಂಭಿಸಬೇಕು. ರೈಲು ನಿಲ್ದಾಣದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಶಾಪಿಂಗ್‌ ಕಾಂಪ್ಲೆಕ್ಸ್‌್ ನಿರ್ಮಿಸಬೇಕು. ಚಾಮರಾಜನಗರದಿಂದ ಮೈಸೂರಿನ ವರೆಗೆ ಜೋಡಿ ರೈಲು ಮಾರ್ಗ ನಿರ್ಮಿಸಬೇಕು ಎಂದು ಕೋರಿದ್ದಾರೆ.

ಕೃಷ್ಣಗಿರಿ– ಚಾಮರಾಜನಗರ, ತಲ್ಲಿಚೇರಿ– ಮೈಸೂರು ರೈಲ್ವೆ ಮಾರ್ಗಕ್ಕೆ (ಗುಂಡ್ಲುಪೇಟೆ ಮಾರ್ಗ) ಈಗಾಗಲೇ ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ. ಈ ಮಾರ್ಗಗಳ ಸರ್ವೇ ಕಾರ್ಯ ನಡೆಸಿ ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

25 ಎಕರೆ ಭೂಮಿ: ಚಾಮರಾಜನಗರ ತಾಲ್ಲೂಕಿನ ಉತ್ತುವಳ್ಳಿ ಬಳಿ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಸ್ಥಾಪನೆಗೆ 25 ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಧ್ರುವ ನಾರಾಯಣ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಉತ್ತುವಳ್ಳಿಯ ಸರ್ವೇ ನಂಬರ್ 117ರಲ್ಲಿ 25 ಎಕರೆ ಜಮೀನನ್ನು ಇಂಟರ್‌ ನ್ಯಾಷನಲ್‌ ಬುದ್ಧಿಸ್ಟ್‌ ಮಾಂಕ್ಸ್‌ ಚಾರಿಟೇಬಲ್‌ ಟ್ರಸ್ಟ್‌ಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.