ADVERTISEMENT

ಲಯನ್ಸ್ ಸಂಸ್ಥೆಯ ಸೇವೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:49 IST
Last Updated 22 ಜುಲೈ 2017, 9:49 IST

ಚಾಮರಾಜನಗರ: ಜಿಲ್ಲೆಯ ಲಯನ್‌ ಸಂಸ್ಥೆಯು ಕಳೆದ ವರ್ಷ 1,700 ಜನರಿಗೆ ಕಣ್ಣಿನ ತಪಾಸಣೆ ನಡೆಯಿಸಿ, 700 ಜನರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಉತ್ತಮ ಸೇವಾ ಕಾರ್ಯ ಮಾಡಿದೆ ಎಂದು 2ನೇ ಉಪ ರಾಜ್ಯಪಾಲ ಲಯನ್‌ ನಾಗರಾಜ್‌ ಭೈರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಂದಿ ಭವನದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ಚಾಮರಾಜ ನಗರ ಲಯನ್‌ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಯನ್ಸ್ ಸಂಸ್ಥೆ 30 ವರ್ಷಗಳಿಂದ ಸಕ್ರಿಯವಾಗಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಕಳೆದ ವರ್ಷ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿ 3 ಪ್ರಶಸ್ತಿಗಳನ್ ಪಡೆದು ಕೊಂಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಗೊಳಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ADVERTISEMENT

ಚಾಮರಾಜನಗರ ಲಯನ್‌ ಸಂಸ್ಥೆಯ ನೂತನ ಅಧ್ಯಕ್ಷ ವೈ.ಪಿ. ರಾಜೇಂದ್ರಪ್ರಸಾದ್ ಮಾತನಾಡಿ, ನೂತನ ತಂಡದ ಸೇವಾವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಗೆ ಒತ್ತು ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಡೆಂಗಿ, ಚಿಕೂನ್‌ಗುನ್ಯ ಮುಂತಾದ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡುತ್ತಿವೆ. ಇವುಗಳನ್ನು ತಡೆಗಟ್ಟಲು ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಿದೆ ಎಂದು ಹೇಳಿದರು.

ಕಣ್ಣಿನ ಉಚಿತ ಚಿಕಿತ್ಸೆ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು. ನಗರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆದು, ಮೂತ್ರಪಿಂಡ ಸಮಸ್ಯೆ ಇರುವ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಹೊಸೂರು ಜಗದೀಶ್, ಖಜಾಂಚಿ ಚೇತನ್, ಉಪಾಧ್ಯಕ್ಷ ವೃಷಭೇಂದ್ರಪ್ಪ, ರಂಗಸ್ವಾಮಿ ನಿರ್ದೇಶಕ ಡಾ.ಎ.ಬಿ.ನಂಜಪ್ಪ ಮತ್ತು ಇತರ ಪದಾಧಿಕಾರಿಗಳಿಗೆ ನಾಗರಾಜ್‌ ಭೈರಿ ಪ್ರಮಾಣ ವಚನ ಬೋಧಿಸಿದರು.

ಪ್ರತಿಭಾ ಪುರಸ್ಕಾರ: ಲಯನ್ ಸಂಸ್ಥೆ ವತಿಯಿಂದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮೂವರು ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಕೊಡೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ, ಮೂತ್ರಪಿಂಡ ವೈಫಲ್ಯವುಳ್ಳ ವ್ಯಕ್ತಿಗೆ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು.

ವೈದ್ಯ ಡಾ.ಬಿ.ಪಿ.ನಟರಾಜಮೂರ್ತಿ, ಕಲಾವಿದ ಉಮ್ಮತ್ತೂರು ಬಸವರಾಜು, ನಟ ಬಸವಟ್ಟಿ ಲೋಕೇಶ್, ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ ಸುಕೃತಾ ಅವರನ್ನು ಸನ್ಮಾನಿಸಲಾಯಿತು. ವಲಯ ಅಧ್ಯಕ್ಷ ಚಂದ್ರಶೇಖರ್, ಜಿ.ಎ.ರಮೇಶ್, ಜಯರಾಮ್, ವಿರೂಪಾಕ್ಷ, ನಾಗೇಶ್‌ ಮೂರ್ತಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.