ADVERTISEMENT

‘ವರ್ಷ ಕಳೆಯಿತು, ಮೋದಿ ಉತ್ತರಿಸಿ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:37 IST
Last Updated 9 ನವೆಂಬರ್ 2017, 5:37 IST

ಚಾಮರಾಜನಗರ: ನೋಟು ರದ್ದತಿಯಾಗಿ ಒಂದು ವರ್ಷವಾದರೂ ದೇಶದಲ್ಲಿ ಏನೂ ಬದಲಾವಣೆಯಾಗಿಲ್ಲ. ಬದಲಾಗಿ ಅಪಾಯಗಳೇ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿ ಬುಧವಾರ ನಗರದಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ತೆರಳಿ ‘ವರ್ಷ ಕಳೆಯಿತು, ಮೋದಿ ಉತ್ತರಿಸಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮೋದಿ ಅವರು ಜಾರಿಗೆ ತಂದ ಅನಾಣ್ಯೀಕರಣವು ಒಂದು ವರ್ಷದಲ್ಲಿ ಆರ್ಥಿಕ ವಿನಾಶವನ್ನು ಸೃಷ್ಟಿಸಿದೆ. ಇದರಿಂದ ದೇಶದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಯಾಗಿಲ್ಲ ಎಂದು ದೂರಿದರು.

ADVERTISEMENT

ಅನಾಣ್ಯೀಕರಣವು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡಿತು. ಕಷ್ಟಪಟ್ಟು ದುಡಿದ ಹಣವನ್ನು ವಿನಿಮಯ ಮಾಡಿಕೊಳ್ಳಲು ಹರಸಾಹಸ ಪಡುವಂತಾಯಿತು. ನೋಟು ರದ್ದತಿ ಘೋಷಣೆ ವೇಳೆ ಪ್ರಧಾನಿ ಅವರು, ಯೋಜನೆ ವಿಫಲವಾದರೆ ಜನರು ತಮ್ಮನ್ನು ಶಿಕ್ಷಿಸಬಹುದು ಎಂದು ಹೇಳಿಕೆ ನೀಡಿದ್ದರು. ಅದನ್ನು ಅವರು ಸ್ಮರಿಸಿಕೊಳ್ಳಬೇಕು ಎಂದು ಟೀಕಿಸಿದರು.

ಅನಾಣ್ಯೀಕರಣದಿಂದ ದೇಶದ ಆರ್ಥಿಕತೆ ದುಃಸ್ಥಿತಿಗೆ ತಲುಪಿತು. ಈ ಕ್ರಮಕ್ಕೆ ಮೋದಿ ನೀಡಿದ ಯಾವ ಕಾರಣವೂ ಈಡೇರಲಿಲ್ಲ. ಬಡವರು, ಮಧ್ಯಮ ವರ್ಗದವರು ನೋಟು ವಿನಿಮಯ ಮಾಡಿಕೊಳ್ಳಲು ದಿನದ 24 ಗಂಟೆಯನ್ನೂ ಬ್ಯಾಂಕ್‌ ಮುಂದೆ ಕಳೆಯುವಂತಾಯಿತು ಎಂದು ಟೀಕಿಸಿದರು.

ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್‌ ಅಹಮದ್‌, ಪ್ರಧಾನ ಕಾರ್ಯದರ್ಶಿ ಜಬೀನೂರ್‌, ನಗರಸಭೆ ಸದ್ಯಸರಾದ ಎಂ. ಮಹೇಶ್‌, ಸಿ.ಎಸ್‌. ಸೈಯದ್‌ ಆರೀಫ್‌, ಮುಖಂಡರಾದ ಶೋಹೇಬ್‌, ಅಜೀಂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.