ADVERTISEMENT

‘ವಾಟಾಳ್‌ ಶೌಚಾಲಯ ಕಟ್ಟಿಸೋಣ’!

ಜೆಎಸ್‌ಎಸ್‌ ಸಮಾರಂಭದಲ್ಲಿ ವಾಟಾಳ್ ನಾಗರಾಜ್–ಮುಖ್ಯಮಂತ್ರಿ ಸ್ವಾರಸ್ಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:48 IST
Last Updated 15 ಮೇ 2017, 7:48 IST
ಚಾಮರಾಜನಗರ: ಜೆಎಸ್‌ಎಸ್‌ ಆಸ್ಪತ್ರೆ ಮತ್ತು ಮಹಿಳಾ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟನೆಯ ವೇದಿಕೆ ಕಾರ್ಯಕ್ರಮ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಣ ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಯಿತು.
 
ತಮ್ಮ ಭಾಷಣದಲ್ಲಿ ವಾಟಾಳ್‌, ‘ಸಿದ್ದರಾಮಯ್ಯ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಅವರದು ಮಾನವೀಯ ವ್ಯಕ್ತಿತ್ವ. ಮಾತು ಮಧುರ. ಅವರ ಜತೆ ಉತ್ತಮ ಬಾಂಧವ್ಯವಿದೆ. ಆದರೆ, ರಾಜ್ಯದ ಜನರಿಗೇ ಕುಡಿಯುವ ನೀರಿಲ್ಲ. ಹಾಗಿದ್ದೂ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಇದೊಂದೇ ನನಗೆ ಅವರ ಜತೆಗಿರುವ ಭಿನ್ನಾಭಿಪ್ರಾಯ’ ಎಂದರು.
 
‘ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ನಕ್ಕಿರುವ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಮುಖ್ಯಮಂತ್ರಿಯಾಗಿ ನಗದೇ ಇದ್ದವರು ಇದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅಷ್ಟೇ ಜಗಳವನ್ನೂ ಆಡಿದ್ದಾರೆ.
 
ವಿಧಾನಸಭೆಯಲ್ಲಿ ಒಂದು ಕಡೆ ಜಗದೀಶ್‌ ಶೆಟ್ಟರ್‌, ಇನ್ನೊಂದೆಡೆ ಎಚ್‌.ಡಿ. ಕುಮಾರಸ್ವಾಮಿ ಅವರ ಎದುರು ತೊಡೆ ತಟ್ಟಿ ಸಾಹುಕಾರ್‌ ಸಿದ್ದಪ್ಪನ (‘ಸಂಪತ್ತಿಗೆ ಸವಾಲ್‌’ ಚಿತ್ರದ ಖಳನಾಯಕನ ಪಾತ್ರ) ರೀತಿ ಕುಸ್ತಿ ಮಾಡಿದ್ದಾರೆ’ ಎಂದು ತಮಾಷೆ ಮಾಡಿದರು.
 
ಹೆದ್ದಾರಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು. ಬೆಂಗಳೂರು–ಮೈಸೂರು ದಾರಿಯಲ್ಲಿ ಒಂದೂ ಶೌಚಾಲಯ ಸಿಗುವುದಿಲ್ಲ ಎಂದು ವಾಟಾಳ್‌ ಹೇಳಿದರು. ಶೌಚಾಲಯದ ಸಮಸ್ಯೆಯ ಕುರಿತ ಅನುಭವ ಹಂಚಿಕೊಂಡರು. 
 
ಚುನಾವಣಾ ಪ್ರಚಾರಕ್ಕೆ ಹಳ್ಳಿಯೊಂದಕ್ಕೆ ತೆರಳಿದ್ದಾಗ ಮೂತ್ರ ಮಾಡಬೇಕಾಯಿತು. ರಸ್ತೆ ಬದಿ ಮಾಡಿದರೆ ಗುರುತು ಹಿಡಿಯುತ್ತಾರೆ. ಅದಕ್ಕೆ ತಲೆ ಮೇಲೆ ಟವೆಲ್‌ ಹಾಕಿಕೊಂಡು ಹೊಲವೊಂದರ ಬೇಲಿ ಬಳಿ ಮೂತ್ರ ಮಾಡುತ್ತಿದ್ದೆ.
 
ಗಾಳಿಗೆ ಟವೆಲ್ ಹಾರಿಹೋಯಿತು. ಅತ್ತ ನಿಲ್ಲಿಸುವಂತೆ ಇಲ್ಲ, ಮುಂದುವರಿಸುವಂತೆಯೂ ಇಲ್ಲ. ಅಷ್ಟರಲ್ಲಿ ಹೊಲದ ಒಡೆಯ ಬಂದು ‘ಏನ್‌ ಸಾರ್ ನೀವಿಲ್ಲಿ...’ ಎಂದು ಕೇಳಿದ. ಇಂತಹ ಕಷ್ಟಗಳನ್ನು ಈಗಲೂ ಅನುಭವಿಸುವಂತಾಗಿದೆ ಎಂದರು.
 
‘ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ಹಣ ನೀಡದೆ ಹೆಣ ನೀಡುವುದಿಲ್ಲ. ಇಡೀ ರಾಜ್ಯದಲ್ಲಿ ಯಾರಿಗಾದರೂ ಈ ರೀತಿ ತೊಂದರೆ ಆದರೆ ನನಗೆ ಫೋನ್‌ ಮಾಡಿ’ ಎಂದು ವಾಟಾಳ್‌ ಹೇಳಿದರು.
 
ಬಳಿಕ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ವಾಟಾಳ್‌ ಅವರನ್ನು ಆಗಾಗ್ಗೆ ಎಳೆದು ತರುತ್ತಾ ತಮಾಷೆ ಮಾಡಿದರು. ‘ನಾನು 1968–69ರಲ್ಲಿ ವಿದ್ಯಾರ್ಥಿಯಾಗಿದ್ದಾಗ ವಾಟಾಳ್‌ ಅವರ ಭಾಷಣ ಕೇಳಲು ಹೋಗಿದ್ದೆ. ಆಗ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ’ ಎಂದರು.
 
‘ಅವರು ಎಂದಿಗೂ ವಯಸ್ಸಿನ ಗುಟ್ಟು ಬಿಟ್ಟುಕೊಡುವುದಿಲ್ಲ. ಬಹುಶಃ ನನ್ನಂತೆ ಅವರಿಗೆ ತಮ್ಮ ಜನ್ಮದಿನಾಂಕ ಗೊತ್ತಿಲ್ಲದೆಯೂ ಇರಬಹುದು. ಅವರು ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಒಮ್ಮೆಯೂ ಆಸ್ಪತ್ರೆಯಲ್ಲಿ ಮಲಗಿದ್ದೇ ಗೊತ್ತಿಲ್ಲ. ಪೊಲೀಸರು ಎತ್ತಿಕೊಂಡು ಹೋಗಲಿ ಎಂದಷ್ಟೇ ಅವರು ಮಲಗುತ್ತಾರೆ’ ಎಂದು ಕಾಲೆಳೆದರು.
 
‘ಎಲ್ಲರೂ ಕುಡಿಯುವ ನೀರಿಲ್ಲ ಎಂದು ದೂರುತ್ತಿದ್ದರೆ, ವಾಟಾಳ್‌ ಮೂತ್ರಕ್ಕೆ ಜಾಗವಿಲ್ಲ ಎನ್ನುತ್ತಿದ್ದಾರೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಹೆಜ್ಜೆಗೊಂದು ಹೋಟೆಲ್‌ ಇವೆ. ಬೇಕಾದರೆ ಸಚಿವ ಮಹದೇವಪ್ಪ ಅವರಿಗೆ ಹೇಳಿ ಹೆದ್ದಾರಿಯಲ್ಲಿ ಅವರಿಗಾಗಿಯೇ ‘ವಾಟಾಳ್‌ ಶೌಚಾಲಯ’ ನಿರ್ಮಿಸೋಣ’ ಎಂದು ಚಟಾಕಿ ಹಾರಿಸಿದರು.
 
‘ವಾಟಾಳ್‌ ಅವರು ಚಾಮರಾಜನಗರ ಜಿಲ್ಲೆ ಸ್ಥಾಪನೆಗೆ ಹೋರಾಟ ನಡೆಸಿದರು. ಆದರೆ, ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ ಅವರನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದು ಅಲ್ಲಿ ಉದ್ಘಾಟನೆ ಮಾಡಿಸಿದರು. ಪಟೇಲರೂ ಸಮಾಜವಾದಿಗಳೇ. ಆದರೆ ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ’ ಎಂದು ವಾಟಾಳರು ನಂಬಿಸಿದರು. ನಾನು ಮತ್ತು ರಾಚಯ್ಯ ಮಾತ್ರ ನಗರದಲ್ಲಿಯೇ ಉದ್ಘಾಟನೆ ಮಾಡಿದೆವು. ನಾವು ಅಧಿಕಾರ ಕಳೆದುಕೊಳ್ಳಲಿಲ್ಲ’ ಎಂದು ನಕ್ಕರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.