ADVERTISEMENT

ವಿಜೃಂಭಣೆಯಿಂದ ನಡೆದ ‘ಕಸ್ತೂರು ಬಂಡಿ’ ಜಾತ್ರೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:08 IST
Last Updated 9 ಜನವರಿ 2017, 9:08 IST

ಸಂತೇಮರಹಳ್ಳಿ:  ಕಸ್ತೂರು ಬಂಡಿ ಎಂದೇ ಹೆಸರಾಗಿರುವ ಬಂಡಿ ಜಾತ್ರೆ ಭಾನುವಾರ ವಿಜೃಂಭಣೆಯಿಂದ ನಡೆಯಿತು. ದೊಡ್ಡಮ್ಮ ತಾಯಿ ದೇವಸ್ಥಾನದ ಮುಂದೆ ಭಕ್ತರು ತೆಂಗಿನ ಕಾಯಿ ಹಿಡಿದು ನಿಂತಿದ್ದರು. ಸೂರ್ಯ ನೆತ್ತಿಗೆ ಬರುತ್ತಿ ದ್ದಂತೆ ಕಸ್ತೂರು ಗ್ರಾಮದ ಬಂಡಿಗೆ ದೇವಸ್ಥಾನದ ಅರ್ಚಕ ಪೂಜೆ ಸಲ್ಲಿಸಿ ತೀರ್ಥ ಎರಚುತ್ತಿದ್ದಂತೆ ಜಾತ್ರೆ ಚಾಲನೆ ಪಡೆಯಿತು.

ಜನರು ಕೈಯಲ್ಲಿದ್ದ ತೆಂಗಿನ ಕಾಯಿ ಗಳನ್ನು ಬಂಡಿಗೆ ಈಡುಗಾಯಿ ಒಡೆದು ಉಘೇ ಎಂದು ಕೂಗಿ ತಮ್ಮ ಭಕ್ತಿ ಸಮರ್ಪಿಸಿದರು. ಕಸ್ತೂರು ಗ್ರಾಮದ ದೊಡ್ಡಮ್ಮ ತಾಯಿ ಜಾತ್ರೆಗೆ ಆಗಮಿಸಿದ ಬಣ್ಣ ಬಣ್ಣದ ಬಂಡಿಗಳನ್ನು ವಿವಿಧ ಹೂ, ಹಣ್ಣುಗಳು, ತಳಿರು ತೋರಣಗಳೊಂದಿಗೆ ಅಲಂಕರಿಸ ಲಾಗಿತ್ತು.

ಕಸ್ತೂರು ಬಂಡಿಗೆ ಮೊದಲು ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ್ದು, ನಂತರ ಬಂಡಿ ಗಳು ಒಂದರ ಹಿಂದೆ ಜಾತ್ರೆಗೆ ಸೇರುವ ಮೂಲಕ ಮೆರುಗು ತಂದುಕೊಟ್ಟವು.
ಜಾತ್ರೆಯಲ್ಲಿ ಬಂಡಿಗಳದೇ ಆಕ ರ್ಷಣೆ. ಗ್ರಾಮಸ್ಥರು ಸ್ಪರ್ಧೆಗೆ ಇಳಿದಂತೆ ಬಂಡಿಗಳನ್ನು ಅಲಂಕರಿಸಿದ್ದರು. 16 ಗ್ರಾಮಗಳಿಂದ ಬಂಡಿಗಳು ಜಾತ್ರೆಗೆ ಆಗಮಿಸಿದ್ದವು.

ಕಸ್ತೂರು, ಭೋಗಾಪುರ, ತೊರ ವಳ್ಳಿ, ದೊಡ್ಡಹೊಮ್ಮ, ಚಿಕ್ಕಹೊಮ್ಮ, ಪುಟ್ಟೇಗೌಡನ ಹುಂಡಿ, ಹೊನ್ನೇಗೌಡನ ಹುಂಡಿ, ಕಿರಗಸೂರು, ಮರಿಯಾಲ, ದಾಸನೂರು, ಕೆಲ್ಲಂಬಳ್ಳಿ, ಆನಹಳ್ಳಿ, ಮೂಕಹಳ್ಳಿ, ಅಂಕುಶರಾಯನಪುರ,  ಸಪ್ಪಯ್ಯನಪುರ ಹಾಗೂ ಹೆಗ್ಗವಾಡಿ ಗ್ರಾಮಸ್ಥರು ತಮ್ಮ ಬಂಡಿಗಳನ್ನು ಬಂದಿದ್ದರು.

ಎತ್ತುಗಳನ್ನು ಸಿಂಗರಿಸಿ ಬಂಡಿಗಳಿಗೆ ಬಾಳೆಗೊನೆ, ಎಳನೀರು, ರಂಗುರಂಗಿನ ಬಣ್ಣದ ಪಟ್ಟಿ, ಹೂವಿನ ಹಾರಗಳು, ಬೆಳೆದಿದ್ದ ಫಸಲು ಕಟ್ಟಿದ್ದರು.
ಬಂಡಿಯಲ್ಲಿ ದೊಡ್ಡಮ್ಮ ತಾಯಿ ವಿಗ್ರಹ ಕೂರಿಸಿ ವಾದ್ಯ ಮೇಳಗಳ ಜತೆಗೆ ಜಾತ್ರೆಗೆ ಆಗಮಿಸಿದ್ದರು.

ಜಾತ್ರೆಗೆ ಬರುತ್ತಿದ್ದಂತೆ ಭಕ್ತರು ಬಂಡಿಯ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಮಹಿಳೆಯರು ದೀವಟಿಗೆ (ಪಂಜು) ಸೇವೆ ಸಲ್ಲಿಸಿದರು. ಜಾತ್ರೆ ಅಂಗವಾಗಿ ದೊಡ್ಡಮ್ಮ ತಾಯಿ ದೇಗುಲದಲ್ಲಿಯೂ ವಿಶೇಷ ಪೂಜೆ ನಡೆಯಿತು.

23 ಗ್ರಾಮಗಳಲ್ಲಿ ಜಾತ್ರೆ ದಿನ ಹಬ್ಬ ನಡೆಯಲಿದೆ. ಜಾತ್ರೆ ದಿನದಂದು ಮಹಿಳೆ ಯರು ಹಬ್ಬ ಆಚರಿಸುವ ಕಾರಣ ಜಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಮಹಿಳೆ ಯರಿಗಾಗಿಯೇ ಮುಂದಿನ ಭಾನುವಾರ ಮರು ಜಾತ್ರೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.