ADVERTISEMENT

ವಿಧ ವಿಧ ಆಹಾರ ತಂತ್ರಜ್ಞಾನ ವಿಶೇಷ

‘ಡಿಎಫ್‌ಆರ್‌ಎಲ್‌’ನಲ್ಲಿ ಗಮನ ಸೆಳೆದ ‘ರಾಷ್ಟ್ರೀಯ ತಂತ್ರಜ್ಞಾನ ದಿನ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:52 IST
Last Updated 12 ಮೇ 2017, 9:52 IST
ಮೈಸೂರು: ನಗರದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್‌)ದಲ್ಲಿ ಪ್ರತಿವರ್ಷದ ಜೂನ್ 11 ವಿಶೇಷವಾದ ದಿನ. ದೇಶ ಕಾಯುವ ಸೈನಿಕರಿಗೆ ನೀಡುವ ಆಹಾರ ತಂತ್ರಜ್ಞಾನವು ಇಲ್ಲಿ ತೆರೆದುಕೊಂಡಿರುತ್ತದೆ.

ಚಳಿಯಲ್ಲೂ ಬೆಂಕಿಯಿಲ್ಲದೆ ನೀರು ಬಿಸಿ ಮಾಡುವುದು, ಹಿಮ ಪ್ರದೇಶಗಳಿಗೆಂದೇ ತಯಾರಾಗುವ ಮೊಸರು, ಸೈನಿಕರ ಆರೋಗ್ಯ ಕಾಪಾಡುವ ವೈದ್ಯಕೀಯ ಕಿಟ್‌. ಹೀಗೆ ಇಲ್ಲಿ ಆಹಾರ, ಆರೋಗ್ಯ ಲೋಕದ ವಿಸ್ಮಯಗಳನ್ನು ಕಾಣಬಹುದು.
 
‘ರಾಷ್ಟ್ರೀಯ ತಂತ್ರಜ್ಞಾನ ದಿನ’ ಕಾರ್ಯಕ್ರಮ ಅಂಗವಾಗಿ ‘ಡಿಎಫ್‌ಆರ್‌ ಎಲ್‌’ ಪ್ರವೇಶ ಮಾಡುವ ಅವಕಾಶ ಗುರುವಾರ ಸಾರ್ವಜನಿಕರಿಗೆ ದೊರಕಿತ್ತು. ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು ಭೇಟಿ ನೀಡಿ, ಆಹಾರ ತಂತ್ರಜ್ಞಾನದ ಪರಿಚಯ ಪಡೆದರು.  
 
‘ಡಿಎಫ್‌ಆರ್‌ಎಲ್‌’ ತಂತ್ರಜ್ಞಾನ ಬಳಸಿ ಸಂಸ್ಕರಿಸಿ ಉತ್ಪಾದಿಸಿದ್ದ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮುಲ್ಕಿಯ ಯೂನಿವರ್ಸಲ್ ಫುಡ್, ಬೆಂಗಳೂರಿನ ಅರಿಹಂತ್ ಇಂಡಸ್ಟ್ರೀಸ್, ತಮಿಳುನಾಡಿನ ಆಗ್ರೊ ಫುಡ್ ಪ್ರಾಡಕ್ಟ್ಸ್‌ನ ಜ್ಯೂಸ್, ದೋಸೆ ಮಿಕ್ಸ್, ಚಪಾತಿ ಮಿಕ್ಸ್, ರೋಟಿ ಮಿಕ್ಸ್, ಜಾಮೂನ್ ಮಿಕ್ಸ್, ಮಿಲ್ಲೆಟ್ ಮಿಕ್ಸ್, ಪಲಾವ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿದ್ದವು.
 
ವಿಧ ವಿಧ ಆಹಾರ: ವರ್ಷಗಟ್ಟಲೇ ಕೆಡದ ಚಪಾತಿ, ರುಚಿಗೆಡದ ಟೀ ಪುಡಿ, ತರಕಾರಿ ಪಲಾವ್‌, ಸೂಜಿ ಹಲ್ವಾ, ತರಕಾರಿ ಸಾರು, ಹಣ್ಣಿನ ಚಾಕೊಲೇಟ್‌, ದೇಶ ಕಾಯುವ ಸೈನಿಕರಿಗೆ ಪೌಷ್ಟಿಕ ಆಹಾರಗಳ ದೊಡ್ಡ ಪಟ್ಟಿಯೇ ಇಲ್ಲಿತ್ತು.
 
ಅಂತೆಯೇ ಸೈನಿಕರ ಆರೋಗ್ಯ ಕಾಪಾಡುವ, ಆಹಾರದ ಗುಣಮಟ್ಟ ಪರೀಕ್ಷಿಸಿ ವಿಷಮುಕ್ತ ಎಂದು ಗುರುತಿಸುವ ಸಾಧನಗಳೂ ಇಲ್ಲಿದ್ದವು. ಶತ್ರು ಪಡೆಗಳು ಸೈನಿಕರ ಊಟಕ್ಕೆ ವಿಷ ಬೆರೆಸಿದ್ದರೆ ಅದನ್ನು ಥಟ್ಟನೆ ಪತ್ತೆ ಮಾಡುವ ತಂತ್ರಜ್ಞಾನ ಮೆಚ್ಚುಗೆಗೆ ಪಾತ್ರವಾದವು.
 
ಆಹಾರ ಸಂರಕ್ಷಣೆ ವಿಭಾಗವು ಅಭಿವೃದ್ಧಿಪಡಿಸಿರುವ ಘನೀಕರಿಸಿ ಒಣಗಿಸಿದ ಆಹಾರ ಪದಾರ್ಥಗಳು. ಕಿಟ್‌ಗಳ ಪ್ರದರ್ಶನ ಇತ್ತು. ಒಣಗಿದ ಅನೇಕ ಏಕದಳ, ದ್ವಿದಳ ಧಾನ್ಯಗಳಿದ್ದವು. ಬೇಳೆ, ಭತ್ತ, ಗೋಧಿ, ಹೆಸರುಕಾಳು, ಅನೇಕ ಬಗೆಯ ಹಿಟ್ಟುಗಳಿದ್ದವು.
 
ಚಳಿಗೂ ಇದೆ ಮೊಸರು: ಚಳಿ ಪ್ರದೇಶದಲ್ಲಿ ಮೊಸರಾಗುವುದು ಕಷ್ಟ. ಇದಕ್ಕಾಗಿಯೇ ವಿಶೇಷವಾಗಿ ಮೊಸರನ್ನು ಅಭಿವೃದ್ಧಿಪಡಿಸಲಾಗಿದೆ. ಪ್ಯಾಕೆಟ್‌ ತೆರೆದು ಬಳಸಬಹುದಾದ ‘ರೆಡಿಮೇಡ್‌’ ಮೊಸರು ಇದಾಗಿದೆ.

ಅಂತೆಯೇ, ಸೈನಿಕರಿಗಾಗಿ ಎತ್ತರದ ರೇಖಾಂಶದ ಪ್ರದೇಶಗಳಲ್ಲಿ ಬಾಳಿಕೆ ಬರುವ ಮಾಂಸದ ತುಂಡು, ಘನೀಕೃತ ಮಾಂಸದ ಸ್ಯಾಂಡ್‌ವಿಚ್‌, ಒಣಗಿಸಿರುವ ಮಟನ್‌ ಬಿರಿಯಾನಿಯನ್ನೂ ಇಲ್ಲಿ ಪ್ರದರ್ಶಿಸಲಾಗಿತ್ತು.
 
ಕಾರ್ಯಕ್ರಮಕ್ಕೆ ‘ಡಿಎಫ್‌ಆರ್‌ಎಲ್‌’ ನಿರ್ದೇಶಕ ಆರ್‌.ಕೆ.ಶರ್ಮಾ ಚಾಲನೆ ನೀಡಿದರು. ಅತಿ ಎತ್ತರದ ಪ್ರದೇಶದಲ್ಲಿರುವ ಸಶಸ್ತ್ರ ಪಡೆಗಳಿಗೆ ಆಹಾರ ಪೂರೈಸುವ ಯಂತ್ರಗಳ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಪಿಜ್ಞಾನಿ ಎ.ರಾಮಕೃಷ್ಣ ಉಪನ್ಯಾಸ ನೀಡಿದರು. ವಿಜ್ಞಾನಿಗಳಾದ ಡಾ.ಎಂ.ಪಾಲ್ ಮುರುಗನ್, ಬಿ.ಎನ್.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.