ADVERTISEMENT

ವಿವಿಧೆಡೆ ಸಂಭ್ರಮ, ಕೆಲವೆಡೆ ವಿರೋಧ

ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ: ಪ್ರತಿಭಟನೆ ನಡೆಸಿದ ಎಸ್‌ಡಿಪಿಐ, ಸಿಹಿ ಹಂಚಿದ ಹಿಂದೂ ಸೇನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 7:05 IST
Last Updated 7 ಡಿಸೆಂಬರ್ 2017, 7:05 IST
ಚಾಮರಾಜನಗರದಲ್ಲಿ ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಚಾಮರಾಜನಗರದಲ್ಲಿ ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 25 ವರ್ಷ ತುಂಬಿದ ಪ್ರಯುಕ್ತ ಬುಧವಾರ ನಗರದಲ್ಲಿ
ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಪ್ರತಿಭಟನೆ ನಡೆಸಿದರೆ, ಆಜಾದ್‌ ಹಿಂದೂ ಸೇನೆಯ ಕಾರ್ಯಕರ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಎಸ್‌ಡಿಪಿಐ ಪ್ರತಿಭಟನೆ: ನಗರದ ಲಾರಿ ನಿಲ್ದಾಣದ ಬಳಿ ಸಮಾವೇಶಗೊಂಡ ಎಸ್‌ಡಿಪಿಐ ಕಾರ್ಯಕರ್ತರು, ಬಾಬರಿ ಮಸೀದಿ ಕೆಡವಿದ ಆರೋಪಿಗಳನ್ನು ಬಂಧಿಸಬೇಕು. ಅದನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

1992ರ ಡಿ. 6, ದೇಶದ ಇತಿಹಾಸದಲ್ಲೇ ಎಂದೂ ಮರೆಯಲಾಗದ ಅವಮಾನಕರ ಮತ್ತು ವಿನಾಶಕ್ಕೆ ಸಾಕ್ಷಿಯಾದ ದಿನವಾಗಿದೆ. ಆ ದಿನ ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್‌ ಗುಂಪುಗಳು ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿತು ಎಂದು ಆರೋಪಿಸಿದರು.

ADVERTISEMENT

ಘಟನೆ ನಡೆದು 25ವರ್ಷವಾಗಿದೆ. ಇದರ ಬಗ್ಗೆ 19 ವರ್ಷ ತನಿಖೆ ನಡೆಸಿದ ಲಿಬರ್‌ಹಾನ್ ಆಯೋಗ ಅಂತಿಮವಾಗಿ 68 ಆರೋಪಿಗಳ ಪಟ್ಟಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಈವರೆಗೂ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಯಾವ ಸರ್ಕಾರವೂ ಮುಂದಾಗಲಿಲ್ಲ. ಆಯೋಗವು ಹೆಸರಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಮಸೀದಿ ಪುನರ್‌ ನಿರ್ಮಾಣ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ದೂರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್‌ ಅಹಮದ್‌ ಮಾತನಾಡಿ, ಇದೇ 3ರಂದು ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಸಂಘ ಪರಿಹಾರದವರು 2 ಗೋರಿಗಳನ್ನು ಧ್ವಂಸ ಮಾಡುವ ಮೂಲಕ ಅಶಾಂತಿ ಉಂಟು ಮಾಡಿದ್ದಾರೆ. ಮುಸ್ಲಿಮರಿಗೆ ರಕ್ಷಣೆ ನೀಡುತ್ತೇವೆ ಎನ್ನುವ ಕಾಂಗ್ರೆಸ್‌ ಕೂಡ ಇವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯ ಎರಡು ಮುಖಗಳಿದ್ದಂತೆ ಎಂದು ಆರೋಪಿಸಿದರು.

ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ನಾವು ಮರೆಯುವುದಿಲ್ಲ. ಈ ಸಂಬಂಧ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದ ಅವರು, ಮಸೀದಿ ಕೆಡವಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಸಿ.ಎಸ್. ಸೈಯದ್ ಆರೀಫ್‌, ಮಹೇಶ್‌, ಪ್ರಧಾನ ಕಾರ್ಯದರ್ಶಿ ಜಬೀನೂರು, ಸದಸ್ಯರಾದ ಕಿಜೋರ್‌, ಇಬ್ರಾನ್‌, ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಅಜೀಂ ಉಲ್ಲಾ ಮತ್ತು ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪೂಜೆ ಸಲ್ಲಿಸಿದ ಸೇನೆ: ಬಾಬರಿ ಮಸೀದಿ ಧ್ವಂಸದ 25ನೇ ವರ್ಷವನ್ನು ವಿಜಯೋತ್ಸವವನ್ನಾಗಿ ಆಜಾದ್‌ ಹಿಂದೂ ಸೇನೆ ಆಚರಿಸಿತು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂದು ನಗರದ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸೇನೆಯ ಕಾರ್ಯಕರ್ತರು, ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.

ಶತಮಾನಗಳ ಹಿಂದೆ ಅಯೋಧ್ಯೆ ಯಲ್ಲಿದ್ದ ರಾಮಮಂದಿರ ವನ್ನು ನೆಲಸಮಗೊಳಿಸಿ ದೇವಸ್ಥಾನದ ಅವಶೇಷಗಳನ್ನು ಬಳಸಿ ಮಸೀದಿ ಕಟ್ಟಿದ್ದರು. ಆ ಕಟ್ಟಡವನ್ನು 1992ರ ಡಿ. 6ರಂದು ಕೆಡವಿ ಹಾಕುವ ಮೂಲಕ ಜಗತ್ತಿಗೆ ಹಿಂದೂ ಸಮಾಜದ ಶಕ್ತಿ ಮತ್ತು ಶೌರ್ಯವನ್ನು ಸಾರಲಾಯಿತು. ಪ್ರತಿಯೊಬ್ಬ ಹಿಂದುವೂ ಈ ದಿನವನ್ನು ಶೌರ್ಯದಿನವನ್ನಾಗಿ ಆಚರಿಸಿ ಹೆಮ್ಮೆ ಪಡಬೇಕು ಎಂದು ಸೇನೆಯ ಅಧ್ಯಕ್ಷ ಪೃಥ್ವಿರಾಜ್‌ ಹೇಳಿದರು.

ಅಯೋಧ್ಯೆಯ ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಪ್ರತಿ ಹಿಂದೂವಿನ ತುಡಿತ ವಾಗಿದೆ. ಅದಕ್ಕಾಗಿ ಹಿಂದೂ ಸಮಾಜ ಪಣತೊಟ್ಟಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದುಶೆಟ್ಟಿ, ನಾಗೇಂದ್ರ ಸ್ವಾಮಿ, ಪಿ.ಬಿ. ಶಾಂತಮೂರ್ತಿ ಕುಲಗಾಣ, ಸುಂದರ್‌ರಾಜ್, ಆರ್. ಪುರುಷೋತ್ತಮ್‌, ಮುಖಂಡರಾದ ಜಿ.ಎಂ. ಗಾಡ್ಕರ್‌, ಶಿವರಾಜ್‌, ಕುಮಾರ್, ಚಂದ್ರಶೇಖರರಾವ್‌, ಶಿವಮ್ಮ, ಕವಿತಾ, ಮಂಗಳಮ್ಮ, ಆಲೂರು ಪರಶಿವಮೂರ್ತಿ, ಬಾಲಸುಬ್ರಮಣ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.