ADVERTISEMENT

ಶಂಕರಾಚಾರ್ಯರ ತತ್ವ ಸದಾ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 1 ಮೇ 2017, 6:06 IST
Last Updated 1 ಮೇ 2017, 6:06 IST

ಚಾಮರಾಜನಗರ: ‘ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು. ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ’ ಎಂದು ಬರಹಗಾರ ಎಸ್. ಲಕ್ಷ್ಮಿನರಸಿಂಹ ಹೇಳಿದರು.

ನಗರದ ಅಗ್ರಹಾರ ಬೀದಿಯ ಪಟ್ಟಾಭಿರಾಮ ಮಂದಿರದಲ್ಲಿ ಭಾನುವಾರ ನಡೆದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಂಕರಾಚಾರ್ಯರು ತಮ್ಮ ಜೀವಿ ತದ ಅಲ್ಪ ಅವಧಿಯಲ್ಲಿಯೇ ದೇಶದ ಎಲ್ಲ ಭಾಗಗಳಿಗೂ ಕಾಲ್ನಡಿಗೆಯಲ್ಲಿ ಸಂಚರಿಸಿ ಗೀತಾಚಾರ್ಯ, ಶ್ರೀಕೃಷ್ಣ ಸಿದ್ಧಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು ಎಂದು ತಿಳಿಸಿದರು.

‘ಕೇವಲ 32 ವರ್ಷ ಬದುಕಿದ್ದ ಶಂಕರಾಚಾರ್ಯರು, ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡರು. ಅವರು ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ, ಸನ್ಯಾಸತ್ವ ಸ್ವೀಕರಿಸುವತ್ತ ಒಲವು ತೋರಿದರು’ ಎಂದರು.

‘ಶಂಕರರು ಆಧ್ಯಾತ್ಮಿಕತೆಗೆ ಸಂಬಂಧ ಪಟ್ಟ ವಾದದಲ್ಲಿ ಹಲವು ವಿದ್ವಾಂಸರನ್ನು ಸೋಲಿಸಿದರು. ಈ ಪೈಕಿ ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಪ್ರಮುಖವಾಗಿದೆ. ದೇಶದ ನಾಲ್ಕು ದಿಕ್ಕುಗಳಲ್ಲಿ ಬದರಿ ಪೀಠ, ಶೃಂಗೇರಿ ಪೀಠ, ಪುರಿ ಪೀಠ, ದ್ವಾರಕಾ ಪೀಠ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಇವರ ಭಜಗೋವಿಂದಂ ಸ್ತೋತ್ರ ಅತ್ಯಂತ ಪ್ರಸಿದ್ದವಾದುದು’ ಎಂದು ವಿವರಿಸಿದರು.

ಕೊಳ್ಳೇಗಾಲ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಶುಪತಿ ಅಯ್ಯರ್ ಶಂಕರ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಚೂಡಾ ಮಾಜಿ ಅಧ್ಯಕ್ಷ  ಬಾಲಸುಬ್ರಹ್ಮಣ್ಯ, ಮುಖಂಡರಾದ ಎಸ್. ಕೃಷ್ಣಮೂರ್ತಿ, ಡಾ.ಬಾಲಸುಬ್ರಹ್ಮಣ್ಯ, ಎಸ್. ಕೃಷ್ಣ ಮೂರ್ತಿ, ಸತೀಶ್‌ಕುಮಾರ್, ರಮೇಶ್, ಸುಬ್ಬಣ್ಣ, ನಾಗೇಂದ್ರಪ್ರಸಾದ್, ನಗರಸಭೆ ಮಾಜಿ ಸದಸ್ಯೆ ಶಾಂತಲಾ, ನಟರಾಜ್ ಅಯ್ಯರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.