ADVERTISEMENT

ಶಾಲೆ, ಮನೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:10 IST
Last Updated 8 ನವೆಂಬರ್ 2017, 6:10 IST

ಯಳಂದೂರು: ಕಿಡಿಗೇಡಿಗಳು ಸೋಮವಾರ ರಾತ್ರಿ ಕಬಿನಿ ಉಪನಾಲೆಯ ಗೇಟ್‌ ಅನ್ನು ತೆರೆದ ಪರಿಣಾಮ ಉಪನಾಲೆಯಲ್ಲಿ ಹೆಚ್ಚುವರಿ ನೀರು ಹರಿದು ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ಹಲವು ಮನೆಗಳು ಮತ್ತು ಶಾಲೆ ಆವರಣ ಜಲಾವೃತಗೊಂಡು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪರದಾಡಿದರು.

ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತುಂಬಿದ್ದ ನೀರನ್ನು ಹೊರ ಹರಿಸಲು ಮಂಗಳವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸ್ಥಳೀಯರು ಪರದಾಡಿದರು. ಕೆಲ ಮನೆಗಳ ಆವರಣದಲ್ಲೂ ನೀರು ನಿಂತಿದ್ದರಿಂದ ಗೋಡೆ ಕುಸಿಯುವ ಭೀತಿ ಯಿಂದ ಚರಂಡಿಯನ್ನು ಒಡೆದು ನೀರು ಹೊರಹೋಗುವಂತೆ ಮಾಡಿದರು.

‘ಸೋಮವಾರ ತಡರಾತ್ರಿ ಕಿಡಿಗೇಡಿಗಳು ಉಪ ಕಾಲುವೆಯ ಗೇಟು ತೆಗೆದಿದ್ದಾರೆ. ಆಮೆಕೆರೆ ಕಡೆ ಹರಿಯುವ ನೀರು ತಳಭಾಗದ ಜಮೀನಿನತ್ತ ನುಗ್ಗಿದೆ. ಹಾಗಾಗಿ, ಹೊಲ, ಗದ್ದೆ ತುಂಬಿಕೊಂಡು ಹೆಚ್ಚಾದ ನೀರು ಶಾಲೆಯ ಆವರಣಕ್ಕೆ ನುಗ್ಗಿದೆ’ ಎಂದು ಗ್ರಾಮದ ಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮದ ನಡುವೆ ಹಾದು ಹೋಗಿರುವ ಉಪ ಕಾಲುವೆ ಕಿರಿದಾಗಿದ್ದು. ಅದರಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಆದ್ದರಿಂದ ಶಾಲೆಯ ಆವರಣಕ್ಕೆ ನೀರು ನುಗ್ಗಿದೆ. ತಡೆಗೋಡೆಯನ್ನು ಕೊರೆದು ನೀರು ಹೊರಬಿಡಬೇಕಾಯಿತು’ ಎಂದು ಜೆಎಸ್‌ಎಸ್‌ ಶಾಲೆಯ ರಾಮಚಂದ್ರ ತಿಳಿಸಿದರು.

‘ಕಬಿನಿ ನಾಲೆಗೆ ನೀರು ಹರಿಸಲಾಗಿದೆ. ಆದರೆ, ತಿ.ನರಸೀಪುರ ವಿಭಾಗದಲ್ಲಿ ಕೃಷಿಗೆ ಹೆಚ್ಚು ನೀರು ಬಳಕೆ ಆಗುತ್ತಿಲ್ಲ. ಆದ್ದರಿಂದ ಉಪ ಕಾಲುವೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸೋಮವಾರ ರಾತ್ರಿ ಕಿಡಿಗೇಡಿಗಳು ಉಪ ನಾಲೆಯ ಗೇಟು ತೆಗೆದಿದ್ದಾರೆ.

ಹಾಗಾಗಿ, ನೀರು ಗೌಡಹಳ್ಳಿ ಗ್ರಾಮದ ಸುತ್ತ ಹರಿದಿದೆ, ತಗ್ಗಿನಲ್ಲಿರುವ ಶಾಲೆ ಮತ್ತು ಮನೆಗಳು ಜಲಾವೃತಗೊಂಡಿವೆ. ಚರಂಡಿ ಮೂಲಕ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.