ADVERTISEMENT

ಶಾಶ್ವತ ಸೂರು: ಕಾಮಗಾರಿ ಚುರುಕು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:29 IST
Last Updated 19 ಸೆಪ್ಟೆಂಬರ್ 2017, 6:29 IST

ಹನೂರು: ಸಮೀಪದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಅನುಕೂಲಕ್ಕಾಗಿ ನಿರ್ಮಾಣವಾಗು ತ್ತಿರುವ ಶಾಶ್ವತ ನೆರಳಿನ ವ್ಯವಸ್ಥೆ ಕಲ್ಪಿಸುವ ಚಾವಣಿ ಕಾಮಗಾರಿ ಚುರುಕು ಪಡೆದಿದ್ದು, ಮುಂಬರುವ ದೀಪಾವಳಿ ಜಾತ್ರೆಗೆ ಬರುವ ಭಕ್ತರಿಗೆ ನೆರಳಿನ ಭಾಗ್ಯ ದೊರೆಯಲಿದೆ.

ಪ್ರತಿ ಯುಗಾದಿ, ಮಹಾಶಿವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಬೆಟ್ಟದಲ್ಲಿ ವಿಜೃಂಭಣೆಯ ಜಾತ್ರೆ ನಡೆಯುತ್ತದೆ. ಉತ್ಸವಕ್ಕೆ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯ ಗಳಿಂದಲೂ ಲಕ್ಷಾಂತರ ಸಂಖ್ಯೆಯ ಭಕ್ತರು ಬರುತ್ತಾರೆ. ಅಲ್ಲದೆ, ಹರಕೆ ಹೊತ್ತ ಭಕ್ತರು ಜಾತ್ರೆಯ ಆರಂಭಕ್ಕೂ ತಿಂಗಳ ಮುಂಚೆಯೇ ಬಂದು ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಭಕ್ತರ ಅನುಕೂಲಕ್ಕೆ ಪ್ರಾಧಿಕಾರದ ವತಿಯಿಂದ ಅಗತ್ಯ ಮೂಲಸೌಲಭ್ಯ ಕಲ್ಪಿಸಿದ್ದರೂ, ಇಲ್ಲಿ ನೆರಳಿನ ವ್ಯವಸ್ಥೆ ಒದಗಿಸುವುದು ದೊಡ್ಡ ಸವಾಲು. ಭಕ್ತರು ನೆರಳಿನ ವ್ಯವಸ್ಥೆಯಿಲ್ಲದೆ ಬಿಸಿಲು ಮಳೆಯಲ್ಲಿ ಪರದಾಡುವಂತಹ ಸ್ಥಿತಿ ಇದೆ. ದೀಪಾವಳಿ ಸಂದರ್ಭದಲ್ಲಂತೂ ಭಕ್ತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ದೇವಸ್ಥಾನ ಸಮೀಪದ ರಂಗಮಂದಿರದಲ್ಲಿ ಹಾಕುವ ಶಾಮಿಯಾನಗಳು ಗಾಳಿಯ ರಭಸಕ್ಕೆ ಹಾರಿಹೋಗಿ ಭಕ್ತರು ರಾತ್ರಿಯಿಡೀ ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಪ್ರತಿವರ್ಷ ಸಾಮಾನ್ಯವಾಗಿದೆ.

ADVERTISEMENT

ಹೀಗಾಗಿ ಭಕ್ತರಿಗೆ ಶಾಶ್ವತ ನೆರಳು ಕಲ್ಪಿಸುವ ಸಲುವಾಗಿ ವಿಶಾಲ ಚಾವಣಿ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಿತ್ತು. 2016 ಸೆ. 26ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ₹47.45 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅದರಲ್ಲಿ ಈ ಚಾವಣಿ ನಿರ್ಮಾಣವೂ ಒಂದು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅವರ ನಿಧನದ ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು.

ನಾಲ್ಕು ತಿಂಗಳಿನಿಂದ ಕಾಮಗಾರಿ ಪುನಾರಂಭವಾಗಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿಯ ನಿರ್ವಹಣೆ ನಡೆಸುತ್ತಿದೆ. ದೀಪಾವಳಿ ಜಾತ್ರೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಒಮ್ಮೆಗೆ ಸುಮಾರು 7,000 ಮಂದಿ ಇಲ್ಲಿ ಆಶ್ರಯ ಪಡೆದುಕೊಳ್ಳಬಹುದು ಎನ್ನುತ್ತಾರೆ ಎಇಇ ಕುಮಾರ್.

ಪ್ರಾಧಿಕಾರ ರಚನೆಯಾಗಿ ಮೂರು ವರ್ಷದ ಬಳಿಕವಾದರೂ ಶಾಶ್ವತ ನೆರಳಿನ ವ್ಯವಸ್ಥೆ ಕಲ್ಪಿಸುತ್ತಿರುವುದಕ್ಕೆ ಭಕ್ತರು ಸಂತೋಷ ವ್ಯಕ್ತಪಡಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಬರುವ ಲಕ್ಷಾಂತರ ಜನರೆಲ್ಲರೂ ಈ ಸೂರಿನಡಿ ಆಸರೆ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಆದರೆ, ತಕ್ಕಮಟ್ಟಿಗಾದರೂ ಬವಣೆ ತಪ್ಪಲಿದೆ. ನೆರಳಿನ ವ್ಯವಸ್ಥೆ ಜತೆಗೆ ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಒದಗಿಸಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.