ADVERTISEMENT

ಸಂಸದರ ಜತೆ ಗ್ರಾಮಸ್ಥರ ವಾಕ್ಸಮರ

ಅಗರ ಗ್ರಾಮ ಪಂಚಾಯಿತಿ: ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 10:43 IST
Last Updated 1 ಏಪ್ರಿಲ್ 2015, 10:43 IST
ಚಾಮರಾಜನಗರ ಜಿಲ್ಲೆಯ ಅಗರ ಗ್ರಾಮದಲ್ಲಿ ಸಂಸದ ಆರ್‌. ಧ್ರುವನಾರಾಯಣ ಅವರೊಂದಿಗೆ ವಾಕ್ಸಮರ ನಡೆಸುತ್ತಿರುವ ಗ್ರಾಮಸ್ಥರು
ಚಾಮರಾಜನಗರ ಜಿಲ್ಲೆಯ ಅಗರ ಗ್ರಾಮದಲ್ಲಿ ಸಂಸದ ಆರ್‌. ಧ್ರುವನಾರಾಯಣ ಅವರೊಂದಿಗೆ ವಾಕ್ಸಮರ ನಡೆಸುತ್ತಿರುವ ಗ್ರಾಮಸ್ಥರು   

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಮಂಗಳವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳ ಪರಿಶೀಲನೆ ವೇಳೆ ಸಂಸದ ಆರ್‌. ಧ್ರುವನಾರಾಯಣ ಅವರ ಮುಂದೆಯೇ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು.

ನಾಗರಿಕರು ಧ್ರುವನಾರಾಯಣ ಅವರೊಂದಿಗೂ ವಾಕ್ಸಮರ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರ ಪತಿಯೇ ಜನರಿಗೆ ಸಮರ್ಥನೆ ನೀಡಲು ಮುಂದಾದ ಪ್ರಸಂಗವೂ ನಡೆಯಿತು. ಇದಕ್ಕೆ ನಾಗರಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2014–15ನೇ ಸಾಲಿನಡಿ ಒಟ್ಟು ₹ 1.26 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಬಹಳಷ್ಟು ಕಾಮಗಾರಿ ಕಳಪೆಯಿಂದ ಕೂಡಿವೆ. ಅಗರದ ಹೊನ್ನುಹೊಳೆ ಹತ್ತಿರದ ಕಾಲುವೆ ಅಭಿವೃದ್ಧಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದರು.

₹ 10 ಲಕ್ಷ ವೆಚ್ಚದಡಿ ಪಶುವೈದ್ಯ ಆಸ್ಪತ್ರೆಯಿಂದ ರಂಗಸ್ವಾಮಿ ನಾಯಕರ ಹೋಟೆಲ್‌ವರೆಗೆ ಚರಂಡಿ ನಿರ್ಮಿಸಬೇಕಿದೆ. ಆದರೆ, ಅರ್ಧಕ್ಕೆ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಈ ಚರಂಡಿ ಕಾಮಗಾರಿಯೂ ಕಳಪೆಯಾಗಿದೆ ಎಂದು ಗ್ರಾಮಸ್ಥರಾದ ವೆಂಕಟೇಶ್‌, ಪ್ರದೀಪ್‌ಕುಮಾರ್‌ ಆರೋಪಿಸಿದರು.

ಬಳಿಕ ಧ್ರುವನಾರಾಯಣ ಮಾತ ನಾಡಿ, ‘ಉದ್ಯೋಗ ಖಾತ್ರಿಯಡಿ ಗ್ರಾಮಕ್ಕೆ ಆಸ್ತಿಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶವಿದೆ.  ಅಗರ ಪಂಚಾಯಿತಿಯಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಚರಂಡಿ, ರಸ್ತೆ, ಶೌಚಾಲಯ ನಿರ್ಮಾಣ ಸೇರಿದಂತೆ ಒಕ್ಕಣೆ ಕಣ ಕೂಡ ನಿರ್ಮಿಸಲಾಗಿದೆ’ ಎಂದರು.

ಕಾಮಗಾರಿಗಳಲ್ಲಿ ಸಣ್ಣಪುಟ್ಟ ದೋಷಗಳು ಕಾಣಿಸುವುದು ಸಹಜ. ಅದನ್ನೇ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ. ಕಳಪೆ ಕಾಮಗಾರಿ ನಡೆದಿದ್ದರೆ ಮೌಖಿಕವಾಗಿ ಹೇಳಬಾರದು. ಲಿಖಿತವಾಗಿ ದೂರು ಸಲ್ಲಿಸಲು ಅವಕಾಶವಿದೆ. ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿದರೆ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ನಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಈಗಾಗಲೇ, ಉದ್ಯೋಗ ಖಾತ್ರಿಯಡಿ ಜಿಲ್ಲೆಯ ಕೆಲವೆಡೆ ಕಂಡುಬಂದಿರುವ ಅವ್ಯವಹಾರ, ಲೋಪದೋಷ ಸಂಬಂಧ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೊಪ್ಪಾಳಿ ಮಹದೇವನಾಯಕ, ಸಿದ್ದರಾಜು, ಯಳಂದೂರು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ರಂಗನಾಥ್‌  ಇತರರು ಹಾಜರಿದ್ದರು.

ಜಿಲ್ಲೆಗೆ 10ನೇ ಸ್ಥಾನ
ಚಾಮರಾಜನಗರ:
‘ಮನರೇಗ ಯೋಜನೆಯಡಿ ಚಾಮರಾಜನಗರ ಜಿಲ್ಲೆಯು ಅನುದಾನ ಬಳಕೆಯಲ್ಲಿ 10ನೇ ಸ್ಥಾನದಲ್ಲಿದೆ’ ಎಂದು ಸಂಸದ ಧ್ರುವನಾರಾಯಣ ಹೇಳಿದರು. ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ‘ಈಗ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಯಾಗುವ ಅನುದಾನ ₹ 10 ಲಕ್ಷ ದಾಟುವುದಿಲ್ಲ. ಹೀಗಾಗಿ, ಉದ್ಯೋಗ ಖಾತ್ರಿ ಪಂಚಾಯಿತಿಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಾರ್ಷಿಕವಾಗಿ ₹ 30ರಿಂದ 40 ಸಾವಿರ ಅನುದಾನ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವು ಗ್ರಾಮ ಪಂಚಾಯಿತಿಗಳು ₹ 1 ಕೋಟಿಗೂ ಹೆಚ್ಚು ಅನುದಾನ ಖರ್ಚು ಮಾಡಿ ಆಸ್ತಿಗಳನ್ನು ನಿರ್ಮಾಣ ಮಾಡಿಕೊಂಡಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.