ADVERTISEMENT

ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲು ಸಲಹೆ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಐ.ಪರಶಿವಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 9:30 IST
Last Updated 20 ಮಾರ್ಚ್ 2017, 9:30 IST

ಚಾಮರಾಜನಗರ: ‘ವಿದ್ಯಾರ್ಥಿಗಳು ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಪರಿಸರದ ಕಾಳಜಿ ಸೇರಿದಂತೆ ಸಾಮಾಜಿಕ ಕಳಕಳಿ ಹೊಂದಿದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ವಿದ್ಯಾರ್ಥಿ ಜೀವನದ ಮುಂದಿನ ಸಾಧನೆಗೆ ದಾರಿದೀಪವಾಗುತ್ತದೆ’ ಎಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಐ.ಪರಶಿವಮೂರ್ತಿ ಹೇಳಿದರು.

ತಾಲ್ಲೂಕಿನ ಬೇಡರಪುರ ಸಮೀಪದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಯುವ ರೆಡ್‌ಕ್ರಾಸ್‌ ಘಟಕ, ರೋಟರಿ ಸಿಲ್ಕ್‌ಸಿಟಿ ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಕಾಲೇಜಿನಲ್ಲಿ ಪ್ರತಿ ವರ್ಷ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಈ ಬಾರಿ ಕಾಲೇಜಿನಲ್ಲಿ 2ನೇ ಬಾರಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಮತ್ತು ಪ್ರೋತ್ಸಾಹದಿಂದ ಕಾಲೇಜಿಗೆ ಉತ್ತಮ ಕಟ್ಟಡ, ಕಾಂಪೌಂಡ್‌ ನಿರ್ಮಿಸಲಾಗಿದೆ. ಹಾಸ್ಟೆಲ್‌್ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಕಾಲೇಜಿನಲ್ಲಿ ಉತ್ತಮ ಕ್ಯಾಂಪಸ್‌ ನಿರ್ಮಾಣವಾಗಿದೆ. ಪ್ರಯೋಗಾಲಯಕ್ಕೆ ಉಪಕರಣಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟದ ಆವಶ್ಯಕವಾಗಿದೆ. ಈ ಬಗ್ಗೆ ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುರಾಂ ಸರ್ವೇಗಾರ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಬೆಳವಣಿಗೆಗೆ ಉತ್ತಮ ಸೇವೆ ಸಲ್ಲಿಸಬೇಕು. ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ದೇಹದಲ್ಲಿ ರಕ್ತ ಕಡಿಮೆಯಾದರೆ ರಕ್ತವನ್ನೇ ನೀಡಬೇಕಾಗಿದೆ. ಹಾಗಾಗಿ, ರಕ್ತದಾನಕ್ಕೆ ಹೆಚ್ಚಿನ ಮಹತ್ವವಿದೆ. ಅನ್ನದಾನ ಹಸಿವು ನೀಗಿಸುತ್ತದೆ. ವಿದ್ಯಾದಾನ ಜ್ಞಾನ ನೀಡುತ್ತದೆ. ರಕ್ತದಾನ ಪ್ರಾಣ ಉಳಿಸುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ 69 ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್‌, ಜಿಲ್ಲಾ ರಕ್ತನಿಧಿ ಅಧಿಕಾರಿ ಡಾ.ಸುಜಾತಾ, ರೋಟರಿ ಸಿಲ್ಕ್‌ಸಿಟಿ ಕಾರ್ಯದರ್ಶಿ ಎಚ್.ಎಂ. ಅಜಯ್, ನಿಯೋಜಿತ ಅಧ್ಯಕ್ಷ ರಾಜು, ಮಾಜಿ ಅಧ್ಯಕ್ಷರಾದ ಡಿ.ಪಿ. ವಿಶ್ವಾಸ್‌, ಚೈತನ್ಯ ಜಿ. ಹೆಗಡೆ, ಸದಸ್ಯರಾದ ಮಲ್ಲೇಶ್, ಅರ್ಜುನ್, ಆಶ್ರಿತ್, ಶರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.