ADVERTISEMENT

ಸಾಲಕ್ಕೆ ಸೂಕ್ತ ದಾಖಲೆ ಸಲ್ಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:52 IST
Last Updated 26 ಸೆಪ್ಟೆಂಬರ್ 2016, 10:52 IST

ಚಾಮರಾಜನಗರ: ‘ಸಾಲದ ಅಗತ್ಯವಿರುವ ಹೊಸ ಸದಸ್ಯರು ಜಮೀನಿನ ದಾಖಲೆ ಸೇರಿದಂತೆ ಅಗತ್ಯ ದಾಖಲಾತಿ ಸಲ್ಲಿಸಬೇಕು’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಹೇಳಿದರು.

ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸೂಕ್ತ ದಾಖಲಾತಿ ನೀಡುವ ಜತೆಗೆ ನಿರಾಪೇಕ್ಷಣಾ ಪತ್ರ ನೀಡಬೇಕು. ಸಂಘದಿಂದ ಸಾಲ ಪಡೆದಿರುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಅಂತಹವರಿಗೆ ಶೂನ್ಯ ಬಡ್ಡಿದರದಲ್ಲಿ ಮತ್ತೆ ಸಾಲ ಸೌಲಭ್ಯ ಲಭಿಸಲಿದೆ ಎಂದರು.

ಯಶಸ್ವಿನಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಕೇವಲ ₹ 50 ಪಾವತಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘವು ಲಾಭದಲ್ಲಿ ನಡೆಯುತ್ತಿದೆ. ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಅತಿಮುಖ್ಯ. ಹಾಗಾಗಿ, ಸಂಘ ಸದೃಢಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ. ಮಂದೇಶ್ ಮಾತನಾಡಿ, ಸಂಘದಲ್ಲಿ ಸಾಲ ವಸೂಲಾತಿಯು ಶೇ 100ರಷ್ಟು ಸಾಧನೆಯಾಗಿದೆ.  ₹ 75 ಲಕ್ಷ ಸಾಲ ವಸೂಲಾತಿಯಾಗಿದೆ ಎಂದರು.

ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಾಗಣ್ಣ, ನಿರ್ದೇಶಕರಾದ ರಾಜೇಂದ್ರ, ಸಿ. ಶಿವಕುಮಾರ್, ಜಯಶಂಕರ್, ರತ್ನಮ್ಮ, ರಾಧಮ್ಮ, ಹಿರಿಯ ಸಹಾಯಕ ಸುಂದ್ರ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.