ADVERTISEMENT

ಸುಪ್ರೀಂಕೋರ್ಟ್‌ನಿಂದ ಕಪಾಳ ಮೋಕ್ಷ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 5:36 IST
Last Updated 6 ಜುಲೈ 2017, 5:36 IST

ಕಲಬುರ್ಗಿ: ‘ಆಳಂದನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರಿಗೆ ₹25 ಲಕ್ಷ ದಂಡ ವಿಧಿಸುವ ಮೂಲಕ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದೆ’ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಹೇಳಿದರು.

‘ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ನನ್ನ ವಿರೋಧಿಗಳಿಗೆ ಸಾರ್ವಜನಿಕ ಹಿತಾಸಕ್ತಿಗಿಂತ ದುಡ್ಡಿನ, ಲಾಭದ ಹಿತಾಸಕ್ತಿ ಹೆಚ್ಚಾಗಿತ್ತು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರಂಭದಲ್ಲಿ ಈ ವಿಷಯದ ಬಗ್ಗೆ ನನ್ನ ವಿರೋಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಬಳಿಕ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನೂ ಕೂಡ ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು’ ಎಂದು ಹೇಳಿದರು.

ADVERTISEMENT

‘ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಬೇಕು ಎಂಬುದು ಸರ್ಕಾರದ ನಿರ್ಧಾರ. ಅದರಂತೆ ಆಳಂದ ಸೀಡ್ ಫಾರ್ಮ್‌ಗೆ ಸೇರಿದ 22 ಎಕರೆಯಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ವಿರೋಧಿಗಳು ಅಡ್ಡಿಪಡಿಸಿದರು.

ಲೀಲಾವತಿ ವಾಸುದೇವ ಭಟ್ ಹಾಗೂ ಜಯಶ್ರೀ ವಿಠಲ ಭಟ್ ಅವರಿಗೆ ಸೇರಿದ ಖಜೂರಿ ರಸ್ತೆಯಲ್ಲಿನ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸಬೇಕು ಎಂದು ಅಡ್ಡಿಪಡಿಸಲು ಆರಂಭಿಸಿದರು. ಈ ಹುನ್ನಾರದ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರಲಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ಹಿತಾಸಕ್ತಿ ಅಡಗಿತ್ತು’ ಎಂದು ಅವರು ಆರೋಪಿಸಿದರು.

‘ಸೀಡ್ ಫಾರ್ಮ್‌ ಜಾಗ ಕೃಷಿ ಇಲಾಖೆಗೆ ಸೇರಿದ್ದು, ಅವರಿಗೆ ಕೋರಳ್ಳಿಯಲ್ಲಿ 23 ಎಕರೆ ಪರ್ಯಾಯ ಜಾಗದ ವ್ಯವಸ್ಥೆ ಮಾಡಲಾಗಿದೆ. ಆ ಜಾಗಕ್ಕೆ ಹೋಗಲು ರಸ್ತೆ ನಿರ್ಮಿಸಿ ಕೊಡುವಂತೆ ಅವರು ಮನವಿ ಮಾಡಿದ್ದು, ಅದಕ್ಕೆ ಒಪ್ಪಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ಆಳಂದ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ರಾಜ್ಯ ಸರ್ಕಾರ ₹60 ಕೋಟಿ ಅನುದಾನ ಮಂಜೂರು ಮಾಡಿದ್ದು, ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಭೀಮಾ ನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತುಂಬಿಸಲು ₹500 ಕೋಟಿ ಅನುದಾನ ಮಂಜೂರಾಗಿದೆ.

ಉಮರ್ಗಾ– ಕಲಬುರ್ಗಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ನಮ್ಮ ವಿರೋಧಿಗಳು ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಆಳಂದ ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಮುಖಂಡರಾದ ಅಬ್ದುಲ್ ಹಮೀದ್, ಗಣೇಶ ಪಾಟೀಲ, ಸಂಗಣ್ಣ ಸನಗುಂದಿ, ರಾಜಶೇಖರ ಯಂಕಂಚಿ, ನಾಗೇಂದ್ರ ಕೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.