ADVERTISEMENT

ಸ್ವಚ್ಛತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಹುಣಸೂರು ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:39 IST
Last Updated 2 ಜನವರಿ 2017, 11:39 IST

ಕೊಳ್ಳೇಗಾಲ: ಸ್ವಚ್ಛತೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹುಣಸೂರು ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ತಿಳಿಸಿದರು.ಲೋಕ ಕಲ್ಯಾಣಾರ್ಥ ಹುಣಸೂರಿನ ಗಾವಡಗೆರೆಯಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ನಗರಕ್ಕೆ ತಲುಪಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನತೆ ವೈಯುಕ್ತಿಕ ಮತ್ತು ಸುತ್ತಮುತ್ತಲ ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತುನೀಡಲು ಮುಂದಾಗಬೇಕು. ಬರಗಾಲದ ಬಿಸಿ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟಕರವಾಗಿ ಪರಿಣಮಿಸಲಿದೆ. ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾದ ದುಃಸ್ಥಿತಿ ಅನೇಕ ಕಡೆ ಕಂಡು ಬಂದಿದೆ.  ಬರಗಾಲ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಹುಣಸೂರಿನಿಂದ ಪ್ರಾರಂಭಗೊಂಡಿರುವ ಲೋಕ ಕಲ್ಯಾಣಾರ್ಥ ಪಾದಯಾತ್ರೆಗೆ ಎಲ್ಲೆಡೆ ವ್ಯಾಪಕ ಬೆಂಬಲ ದೊರೆಯುತ್ತಿದೆ. ವಿವಿಧ ಜನಾಂಗಕ್ಕೆ ಸೇರಿದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಮೈಸೂರು, ತಿ.ನರಸೀಪುರ ಮಾರ್ಗದಲ್ಲಿ ಬಂದ ಈ ಪಾದಯಾತ್ರೆಗೆ ಪ್ರತಿ ಗ್ರಾಮದಲ್ಲೂ ಸ್ವಾಗತ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಪಾದಯಾತ್ರೆ ಮೂಲಕ ಜನತೆಯಲ್ಲಿ ಬರಗಾಲ ಮತ್ತು ಸ್ವಚ್ಛತೆ ಕುರಿತು ಜಾಗೃತಿಗೆ ಮೂಡಿಸಲಾಗಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಬರಗಾಲದಿಂದ ಜನರನ್ನು ರಕ್ಷಿಸುವಂತೆ ಹಾಗೂ ಜನತೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬುದ್ಧಿನೀಡುವಂತೆ ಮಹದೇಶ್ವರ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿದರು.

ವೀರಶೈವ ಹಿರಿಯ ಮುಖಂಡ ಡಾ. ಎಸ್‌. ಶಿವರುದ್ರಸ್ವಾಮಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಪುಟ್ಟಮಲ್ಲಪ್ಪ, ಸಿದ್ದೇಶ್‌ಬಾಬು (ಗೊಂಬೆ), ಬಸವ ಸೇವಾ ಸಮಿತಿ ಅಧ್ಯಕ್ಷ ಎಸ್‌. ಮಲ್ಲೇಶಪ್ಪ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಸಿದ್ದಲಿಂಗಸ್ವಾಮಿ, ಮಲ್ಲಪ್ಪ,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂದೀಶ್‌,ಲೋಕೇಶ್‌, ಮಲ್ಲೇಶ್, ಪ್ರಭುಸ್ವಾಮಿ ಹಾಗೂ  ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.